ADVERTISEMENT

ನಕಲಿ ಚಿನ್ನದ ಬಿಸ್ಕತ್‌ ಮಾರಿ ₹ 1.30 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST

ಬೆಂಗಳೂರು: ನಗರದ ಚಿನ್ನದ ವ್ಯಾಪಾರಿಯೊಬ್ಬರಿಗೆ ನಕಲಿ ಚಿನ್ನದ ಬಿಸ್ಕತ್‌ ಮಾರಾಟ ಮಾಡಿ ₹ 1.30 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆರೋಪಿ ಇಲ್ಯಾಸ್ ಖಾನ್ ಅಜ್ಮೇರ್ (40) ಎಂಬಾತನನ್ನು ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಇಲ್ಯಾಸ್, ಚಿನ್ನದ ವ್ಯಾಪಾರದ ಮಧ್ಯವರ್ತಿ ಆಗಿದ್ದ. ನಕಲಿ ಚಿನ್ನ ಮಾರಿದ್ದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಗುಜರಾತ್‌ನಲ್ಲಿರುವ ಮಾಹಿತಿ ಇದೆ. ಸದ್ಯ ಇಲ್ಯಾಸ್ನನ್ನು ಮಾತ್ರ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತನ್ನ ಬಳಿ 3 ಕೆ.ಜಿ ತೂಕದ ಚಿನ್ನದ ಬಿಸ್ಕತ್ ಇರುವುದಾಗಿ ಹೇಳಿದ್ದ ಪ್ರಮುಖ ಆರೋಪಿ, ಇಲ್ಯಾಸ್‌ನನ್ನು ಸಂಪರ್ಕಿಸಿದ್ದ. ಬಿಸ್ಕತ್ ಮಾರಾಟ ಮಾಡಿಸಿಕೊಟ್ಟರೆ ಉತ್ತಮ ಕಮಿಷನ್ ನೀಡುವುದಾಗಿ ತಿಳಿಸಿದ್ದ. ಪ್ರಮುಖ ಆರೋಪಿಯನ್ನು ಬೆಂಗಳೂರಿಗೆ ಕರೆಸಿದ್ದ ಇಲ್ಯಾಸ್, ನಗರ್ತಪೇಟೆಯ ಚಿನ್ನದ ವ್ಯಾಪಾರಿ ರಾಹುಲ್‌ ಕುಮಾರ್ ಎಂಬುವರ ಪರಿಚಯ ಮಾಡಿಸಿದ್ದ.’

ADVERTISEMENT

‘ಚಿನ್ನದ ಬಿಸ್ಕತ್ ನೋಡಿದ್ದ ರಾಹುಲ್‌ಕುಮಾರ್, ₹ 1.30 ಕೋಟಿ ನೀಡಿ ಖರೀದಿಸಿದ್ದ. ತನ್ನ ಮಳಿಗೆಯಲ್ಲಿ ಬಿಸ್ಕತ್ ಇಟ್ಟುಕೊಂಡಿದ್ದ. ಹಣ ಪಡೆದುಕೊಂಡ ಪ್ರಮುಖ ಆರೋಪಿ ನಗರ ತೊರೆದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸೆ. 16ರಂದು ಚಿನ್ನದ ವ್ಯಾಪಾರಿಯೊಬ್ಬರು ರಾಹುಲ್‌ ಕುಮಾರ್ ಅವರ ಮಳಿಗೆಗೆ ಬಂದಿದ್ದರು. ಬಿಸ್ಕತ್ ಖರೀದಿಸಲು ಮುಂದಾಗಿದ್ದ ಅವರು, ಅದನ್ನು ಪರೀಕ್ಷೆ ಮಾಡಿಸಿಕೊಂಡು ಬರುವುದಾಗಿ ತೆಗೆದುಕೊಂಡು ಹೋಗಿದ್ದರು. ಮಳಿಗೆ ಕೆಲಸಗಾರರೂ ಜೊತೆಗೆ ತೆರಳಿದ್ದರು. ಚಿನ್ನದ ಬಿಸ್ಕತ್ ನಕಲಿ ಎಂಬುದು ಪರೀಕ್ಷೆ ವೇಳೆ ಗೊತ್ತಾಗಿತ್ತು. ಬಳಿಕ ರಾಹುಲ್‌ ಕುಮಾರ್ ಅವರು ಠಾಣೆಗೆ ದೂರು ನೀಡಿದ್ದರು’ ಎಂದೂ ಹೇಳಿವೆ.

ಸಾರಾಂಶ

ನಗರದ ಚಿನ್ನದ ವ್ಯಾಪಾರಿಯೊಬ್ಬರಿಗೆ ನಕಲಿ ಚಿನ್ನದ ಬಿಸ್ಕತ್‌ ಮಾರಾಟ ಮಾಡಿ ₹ 1.30 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆರೋಪಿ ಇಲ್ಯಾಸ್ ಖಾನ್ ಅಜ್ಮೇರ್ (40) ಎಂಬಾತನನ್ನು ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.