ADVERTISEMENT

ಬೆಂಗಳೂರು: 4 ಜಿ ವಿನಾಯಿತಿ ನೀಡಲು ಒಪ್ಪದ ಹಣಕಾಸು ಇಲಾಖೆ

ಬಿಬಿಎಂಪಿ ಕೈಗೆತ್ತಿಕೊಂಡಿರುವ ಪಶ್ಚಿಮ ಕಾರ್ಡ್‌ ರಸ್ತೆ ಮೇಲ್ಸೇತುವೆಯ ಹೆಚ್ಚುವರಿ ಕಾಮಗಾರಿ

ಮಂಜುನಾಥ್ ಹೆಬ್ಬಾರ್‌
Published 17 ಜನವರಿ 2022, 19:17 IST
Last Updated 17 ಜನವರಿ 2022, 19:17 IST
ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ
ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ   

ಬೆಂಗಳೂರು: ಪಶ್ಚಿಮ ಕಾರ್ಡ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್‌ ಕರೆಯುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್‌ 4 ಜಿ ಅಡಿ ವಿನಾಯಿತಿ ನೀಡಲು ಹಣಕಾಸು ಇಲಾಖೆ ಒಪ್ಪಿಲ್ಲ.

ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ (ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ) ವಹಿಸಲು ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ ಅಡಿ ವಿನಾಯಿತಿ ನೀಡಬೇಕು ಹಾಗೂ ರಾಜ್ಯ ಸರ್ಕಾರವೇ ಅನುದಾನ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಹಣಕಾಸು ಇಲಾಖೆಯು, ‘ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಬಿಎಂಪಿಯು ಸ್ವಂತ ಸಂಪನ್ಮೂಲದಿಂದ ಭರಿಸಬೇಕು ಅಥವಾ ಇತ್ತೀಚೆಗೆ ಅನುಮೋದನೆಗೊಂಡಿರುವ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಸೇರಿಸಲು ಕ್ರಮ ವಹಿಸಬೇಕು’ ಎಂದು ಸೂಚಿಸಿದೆ. ಈ ಸಂಬಂಧ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಜನವರಿ 13ರಂದು ಪತ್ರ ಬರೆದಿದ್ದಾರೆ.

‘ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ₹10 ಕೋಟಿಗಿಂತ ಕಡಿಮೆ ಇರದಂತೆ ಪ್ಯಾಕೇಜ್‌ಗಳನ್ನು ಮಾಡಿ ಕೆಟಿಪಿಪಿ ಕಾಯ್ದೆಯನ್ವಯ ಟೆಂಡರ್‌ ಕರೆಯಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಜನವರಿ 14ರಂದು ಆದೇಶ ಹೊರಡಿಸಿದೆ. ಒಂದು ವೇಳೆ, ಅಮೃತ ನಗರೋತ್ಥಾನ ಯೋಜನೆಯಡಿ ಅನುದಾನ ನೀಡಿದರೆ ಈ ಯೋಜನೆಗೂ ಟೆಂಡರ್ ಕರೆಯಬೇಕಾಗುತ್ತದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. 

ADVERTISEMENT

ಇನ್ನೊಂದೆಡೆ, ಈ ಯೋಜನೆಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡುವ ಮೊದಲೇ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ.

ಪಶ್ಚಿಮ ಕಾರ್ಡ್‌ ರಸ್ತೆಗೆ ರಾಜಾಜಿನಗರದಲ್ಲಿ – ಮಂಜುನಾಥನಗರ ಮುಖ್ಯರಸ್ತೆ ಕೂಡುವಲ್ಲಿ ದ್ವಿಪಥ ಸಂಚಾರದ ಮೇಲ್ಸೇತುವೆ, ಶಿವನಗರದ 8ನೇ ಮತ್ತು 1ನೇ ಮುಖ್ಯ ರಸ್ತೆಗಳು ಕೂಡುವಲ್ಲಿ ದ್ವಿಮುಖ ಸಂಚಾರದ ಇಂಟಿಗ್ರೇಟೆಡ್‌ ಅಂಡರ್‌ ಪಾಸ್‌ ಮತ್ತು ಬಸವೇಶ್ವರ ನಗರದ ಮುಖ್ಯರಸ್ತೆ ಕೂಡುವಲ್ಲಿ ಏಕಮುಖ ಸಂಚಾರದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಪ್ಯಾಕೇಜ್‌ನ ಗುತ್ತಿಗೆಯನ್ನು ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿದೆ. ಒಟ್ಟು ₹ 89.86 ಕೋಟಿ ವೆಚ್ಚದ ಈ ಪ್ಯಾಕೇಜ್‌ಗೆ 2015ರ ಫೆ.11ರಂದು ಅನುಮೋದನೆ ನೀಡಲಾಗಿತ್ತು.

ಮಂಜುನಾಥನಗರದ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ 2018ರ ಆ. 27ರಂದು ಲೋಕಾರ್ಪಣೆಗೊಂಡಿದೆ. ಶಿವನಗರ 8ನೇ ಮತ್ತು 1ನೇ ಮುಖ್ಯ ರಸ್ತೆ ಕೂಡುವಲ್ಲಿ ಇಂಟಿಗ್ರೇಟೆಡ್‌ ಅಂಡರ್‌ಪಾಸ್‌ ಬದಲಿಗೆ ಮೇಲ್ಸೇತುವೆಯನ್ನೇ ನಿರ್ಮಿಸಲಾಗಿದ್ದು, 2021ರ ಅ. 4ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಬಸವೇಶ್ವರನಗರ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ ಗಡುವು ಮುಗಿದು ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ.

ಶಿವನಗರ ಮುಖ್ಯರಸ್ತೆಗಳು ಕೂಡುವಲ್ಲಿನ ಮೇಲ್ಸೇತುವೆಯ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ ವಸತಿ ಸಚಿವ ವಿ.ಸೋಮಣ್ಣ ಹಾಗೂ ರಾಜಾಜಿನಗರ ಶಾಸಕ ಎಸ್‌. ಸುರೇಶ್‌ ಕುಮಾರ್‌, ಬಸವೇಶ್ವರನಗರದ ಮುಖ್ಯರಸ್ತೆ ಕೂಡುವಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿಯವರು, ಬಿಬಿಎಂಪಿ ಅಧಿಕಾರಿಗಳಿಗೆ ಮೌಖಿಕ ಆದೇಶವನ್ನೂ ನೀಡಿದ್ದರು. ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತರು ಬಸವೇಶ್ವರನಗರ ರಸ್ತೆ ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲ್ಸೇತುವೆಯನ್ನು ₹ 23.62 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ಕೋರಿ ಅ.27ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಯೋಜನಾ ಮೊತ್ತ ₹169 ಕೋಟಿಗೆ ಹೆಚ್ಚಳ

ಪಶ್ಚಿಮ ಕಾರ್ಡ್‌ ರಸ್ತೆ ಕಾಮಗಾರಿಯ ಪ್ಯಾಕೇಜನ್ನು ಮೂರು ಬಾರಿ ಪರಿಷ್ಕರಿಸಲಾಗಿದೆ. ಶಿವನಗರ ಮುಖ್ಯ ರಸ್ತೆ ಕೂಡುವಲ್ಲಿ ಕೆಳಸೇತುವೆ ಬದಲು ಇಂಟಿಗ್ರೇಟೆಡ್‌ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು. ಈ ಪರಿಷ್ಕರಣೆಯಿಂದ ಪ್ಯಾಕೇಜ್‌ನ ಮೊತ್ತ ₹ 89.86 ಕೋಟಿಯಿಂದ ₹ 112.07 ಕೋಟಿಗೆ ಹೆಚ್ಚಿತು. ಬಳಿಕ 72ನೇ ಅಡ್ಡರಸ್ತೆಯ ಬಳಿ ₹ 33.71 ಕೋಟಿ ವೆಚ್ಚದ ಮೇಲ್ಸೇತುವೆಯನ್ನೂ ಇದೇ ಪ್ಯಾಕೇಜ್‌ಗೆ ಸೇರಿಸಲಾಯಿತು. ಆಗ ಮೊತ್ತ ₹ 145.78 ಕೋಟಿಗೆ ಹೆಚ್ಚಿತು. ಈಗ ಬಸವೇಶ್ವರನಗರ ಜಂಕ್ಷನ್‌ನಲ್ಲಿ ₹ 23.62 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ. ಈಗ ಪ್ಯಾಕೇಜ್‌ ಮೊತ್ತ ₹ 169.4 ಕೋಟಿಗೆ ಹೆಚ್ಚಳವಾಗುತ್ತಿದೆ.

ಸಾರಾಂಶ

ಬೆಂಗಳೂರು: ಪಶ್ಚಿಮ ಕಾರ್ಡ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್‌ ಕರೆಯುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್‌ 4 ಜಿ ಅಡಿ ವಿನಾಯಿತಿ ನೀಡಲು ಹಣಕಾಸು ಇಲಾಖೆ ಒಪ್ಪಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.