ADVERTISEMENT

ಸೋರುತಿವೆ ಬಿಬಿಎಂಪಿ ಶಾಲೆಗಳು- ಬಹುಪಾಲು ಶಾಲೆಗಳು ಸುಣ್ಣ–ಬಣ್ಣವನ್ನೇ ಕಂಡಿಲ್ಲ

ಒಂದೇ ಕಟ್ಟಡದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಕಲಿಕೆ l ಕೆಲ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ

ಜಿ.ಶಿವಕುಮಾರ
Published 11 ಅಕ್ಟೋಬರ್ 2021, 4:10 IST
Last Updated 11 ಅಕ್ಟೋಬರ್ 2021, 4:10 IST
ಬೆಂಗಳೂರಿನ ಬನ್ನಪ್ಪ ಪಾರ್ಕ್ ಬಳಿ ಇರುವ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ ಕಟ್ಟಡದ ಗೋಡೆ ಮೇಲೆ ಪಾಚಿ ಬೆಳೆದಿರುವುದು -     ಪ್ರಜಾವಾಣಿ ಚಿತ್ರ/ ರಂಜು ಪಿ.
ಬೆಂಗಳೂರಿನ ಬನ್ನಪ್ಪ ಪಾರ್ಕ್ ಬಳಿ ಇರುವ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ ಕಟ್ಟಡದ ಗೋಡೆ ಮೇಲೆ ಪಾಚಿ ಬೆಳೆದಿರುವುದು -     ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಚಾವಣಿಯಿಂದ ಪಟಪಟನೆ ಉದುರುವ ಮಳೆ ನೀರಿನ ಹನಿಗಳು. ಗೋಡೆಗಳ ಮೇಲೆ ಚಾಚಿರುವ ಪಾಚಿ. ಅಲ್ಲಲ್ಲಿ ಒಡೆದಿರುವ ಕಿಟಕಿ ಗಾಜುಗಳು. ಕಾಲಿಟ್ಟರೆ ಜಾರುವ ಸಿಮೆಂಟ್‌ ನೆಲ. ತುಕ್ಕು ಹಿಡಿದಿರುವ ಕಿಟಕಿಯ ಸರಳುಗಳು...

ಉದ್ಯಾನನಗರಿಯಲ್ಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಹುಪಾಲು ಶಾಲೆಗಳಲ್ಲಿ ಕಂಡ ದೃಶ್ಯಗಳಿವು.

ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪಾಲಿಕೆಯು ನಗರದಲ್ಲಿ ಸುಮಾರು 146 ಶಾಲೆ, ಕಾಲೇಜು ಹಾಗೂ ನರ್ಸರಿಗಳನ್ನು ಆರಂಭಿಸಿದೆ. ಈ ಪೈಕಿ ಹಲವು ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ‍ಪೂರ್ವ ವಲಯಗಳಲ್ಲಿರುವ ಅನೇಕ ಶಾಲಾ ಕಟ್ಟಡಗಳು 50, 60 ವರ್ಷಗಳಷ್ಟು ಹಳೆಯದಾಗಿವೆ. ಇವು ಸುಣ್ಣ ಬಣ್ಣ ಕಾಣದೆ ವರ್ಷಗಳೇ ಉರುಳಿವೆ. ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಉಸಿರು ಬಿಗಿಹಿಡಿದೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. 

ADVERTISEMENT

ಕೆಲ ಕಟ್ಟಡಗಳ ನವೀಕರಣವಾಗಿದ್ದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಮಳೆ ನೀರು ಸರಾಗವಾಗಿ ಸಾಗಲು ಸರಿಯಾದ ವ್ಯವಸ್ಥೆಯನ್ನೇ ಮಾಡಿಲ್ಲ. ಹೀಗಾಗಿ ಚಾವಣಿಯಲ್ಲೇ ನೀರು ಸಂಗ್ರಹವಾಗುತ್ತದೆ. ಇದರಿಂದ ಕೆಲವೆಡೆ ತರಗತಿ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತಿವೆ. ತೇವಾಂಶದಿಂದ ಗೋಡೆಯ ಮೇಲ್ಪದರವೇ ಕಿತ್ತುಹೋಗಿವೆ. ಜೋರು ಮಳೆ ಸುರಿದರೆ ಶಾಲೆಗಳ ಆವರಣ ಕೆರೆಯಂತಾಗಿಬಿಡುತ್ತದೆ. ಆ ನೀರಿನಲ್ಲಿ ಹಾದು ಹೋಗಲು ಮಕ್ಕಳು ಹರಸಾಹಸ ಪಡುವ ಸ್ಥಿತಿಯೂ ಇದೆ. 

ಪಡ್ಡೆ ಹುಡುಗರ ಅಡ್ಡೆ: ‘ಕೊಳೆಗೇರಿಗಳು ಹಾಗೂ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಇರುವ ಶಾಲಾ ಕಟ್ಟಡಗಳು ಪಡ್ಡೆ ಹುಡುಗರ ಅಡ್ಡೆಗಳಾಗಿವೆ. ಸಂಜೆಯಾದರೆ ಶಾಲಾ ಆವರಣ ಪ್ರವೇಶಿಸುವ ಪುಂಡರು ಅಲ್ಲೇ ಗಾಂಜಾ ಸೇದುತ್ತಾರೆ. ರಾತ್ರಿ ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಹಾಕುತ್ತಾರೆ. ಕಾಂಪೌಂಡ್‌ ಹಾರಿ ಬಂದು ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾರೆ’ ಎಂದು ಆಸ್ಟಿನ್‌ ಟೌನ್‌ನ ನಿವಾಸಿಯೊಬ್ಬರು ದೂರಿದರು.

‘ಕೆಲವರು ಸಾಕು ನಾಯಿಗಳನ್ನು ತಂದು ಶಾಲಾ ಆವರಣದಲ್ಲಿ ಬಿಡುತ್ತಾರೆ. ಅವು ಅಲ್ಲೇ ಮಲ ಮೂತ್ರ ವಿಸರ್ಜಿಸುತ್ತವೆ. ಇನ್ನೂ ಕೆಲವರು ದನಗಳನ್ನೂ ತಂದು ಮೈದಾನದಲ್ಲಿ ಬಿಟ್ಟು ಹೋಗುತ್ತಾರೆ. ಆ ಬಗ್ಗೆ ಪ್ರಶ್ನಿಸಿದರೆ

ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಗೇಟಿಗೆ ಬೀಗ ಹಾಕಿದರೆ ಅದನ್ನು ಒಡೆದು ಒಳ ನುಗ್ಗುತ್ತಾರೆ. ಪೊಲೀಸ್‌ ಠಾಣೆಗೆ ದೂರು ನೀಡಿದರೂ ಅವರ ಹಾವಳಿ ತಪ್ಪಿಲ್ಲ. ಪಾಲಿಕೆಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರವೇಶ ನಿರಾಕರಿಸಿದರೆ ನಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೀಗಾಗಿ ಯಾರನ್ನೂ ತಡೆಯುವ ಗೋಜಿಗೆ ಹೋಗುತ್ತಿಲ್ಲ’ ಎಂದು ಕಾಲೇಜೊಂದರ ಭದ್ರತಾ ಸಿಬ್ಬಂದಿ ಹೇಳಿದರು.

ಇಂಟರ್‌ನೆಟ್‌ ಸೌಕರ್ಯವೇ ಇಲ್ಲ: ಶಾಲಾ ಹಂತದಿಂದಲೇ ಮಕ್ಕಳನ್ನು ತಂತ್ರಜ್ಞಾನ ಲೋಕಕ್ಕೆ ಅಣಿಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ. ಈ ದಿಸೆಯಲ್ಲಿ ಡಿಜಿಟಲ್‌ ಕಲಿಕೆಗೆ ಒತ್ತು ನೀಡುವುದಾಗಿ ತಿಳಿಸಿದೆ. ಅದಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸುವುದಾಗಿಯೂ ಹೇಳಿದೆ. ಆದರೆ, ಬಿಬಿಎಂಪಿಯ ಕೆಲ ಶಾಲೆ ಹಾಗೂ ಕಾಲೇಜುಗಳು ಈಗಲೂ ಇಂಟರ್‌ನೆಟ್‌ ಸೌಲಭ್ಯದಿಂದ ವಂಚಿತವಾಗಿವೆ.

‘ನಮ್ಮಲ್ಲಿ ಕಂಪ್ಯೂಟರ್‌ ಲ್ಯಾಬ್‌ ಇದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಿದ್ದೆವು. ಅದಕ್ಕಾಗಿ ಮಾಸಿಕ ₹3,500 ಹಣ ಪಾವತಿಸಬೇಕಿತ್ತು. ಈ ಮೊತ್ತ ನೀಡಲು ಬಿಬಿಎಂಪಿ ಅಧಿಕಾರಿಗಳು ನಿರಾಕರಿಸಿದರು. ಪ್ರತಿ ತಿಂಗಳು ಅಷ್ಟು ಮೊತ್ತ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಇಂಟರ್‌ನೆಟ್‌ ಸಂಪರ್ಕವನ್ನೇ ಕಡಿತಗೊಳಿಸಿದ್ದೇವೆ. ನಮ್ಮಲ್ಲಿ ಗ್ರಂಥಾಲಯ ಕೂಡ ಇಲ್ಲ’ ಎಂದು ಕಾಲೇಜೊಂದರ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಲೇಜಿನ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಅದಕ್ಕೆ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಅವ್ಯವಸ್ಥೆಯ ನಡುವೆಯೂ ತರಗತಿಗಳನ್ನು ನಡೆಸುವುದು ಅನಿವಾರ್ಯವಾಗಿದೆ’ ಎಂದರು. 

ಗುಣಮಟ್ಟದ ಶಿಕ್ಷಣದ ಕೊರತೆ: ‘ಶಾಲೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನೇ ಪಾವತಿಸುತ್ತಿಲ್ಲ. ಹೀಗಾಗಿ ಅವರು ಪಾಠ ಮಾಡುವತ್ತ ಚಿತ್ತ ಹರಿಸುತ್ತಿಲ್ಲ. ಕೆಲ ಶಿಕ್ಷಕರು ಸರಿಯಾಗಿ ತರಗತಿಗಳನ್ನೇ ನಡೆಸುವುದಿಲ್ಲ. ಬೇಕಾಬಿಟ್ಟಿ ರಜೆ ಹಾಕುತ್ತಾರೆ. ಊರಿಗೆ ಹೋದರೆ ವಾರ ಕಳೆದರೂ ಬರುವುದಿಲ್ಲ. ಶಿಕ್ಷಕರ ವರ್ಗಾವಣೆಯೂ ಎಗ್ಗಿಲ್ಲದೆ ನಡೆಯುತ್ತದೆ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ’ ಎಂದು ಶಾಂತಿನಗರದ ಮಂಜುನಾಥ್‌ ಹೇಳಿದರು.

ಕೆಲವೆಡೆ ಕೊಠಡಿಗಳ ಅಭಾವ

ಕೋವಿಡ್‌ ಬಳಿಕ ಅನೇಕರ ಬದುಕು ತಲ್ಲಣಗೊಂಡಿದೆ. ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲಾಗದ ಸ್ಥಿತಿಗೆ ತಲು‍‍ಪಿರುವ ಹಲವು ಪೋಷಕರು ಮಕ್ಕಳನ್ನು ಬಿಬಿಎಂಪಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹೀಗಾಗಿ ಪಾಲಿಕೆಯ ಶಾಲೆಗಳಲ್ಲಿ ದಾಖಲಾತಿ ಏರುತ್ತಿದೆ. ಆದರೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳನ್ನು ಹೆಚ್ಚಿಸುವ ಕೆಲಸ ಆಗಿಲ್ಲ.

‘30 ಮಂದಿಯ ಸಾಮರ್ಥ್ಯವಿರುವ ಕೊಠಡಿಗಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ. ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರಾಂಶುಪಾಲರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೆಲ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ

ನಗರದ ಕೆಲವೆಡೆ ಕಾಲೇಜು ಕಟ್ಟಡದಲ್ಲೇ ಪ್ರೌಢಶಾಲೆಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ಕೆಲ ಕಟ್ಟಡಗಳಿಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರು ಇರುವ ಕಾಲೇಜು, ಪಾದರಾಯನಪುರ, ಗಂಗಾನಗರ, ಸುಂಕೇನಹಳ್ಳಿ ಸೇರಿದಂತೆ ವಿವಿಧೆಡೆ ಸುಸಜ್ಜಿತ ಕಟ್ಟಡಗಳಿವೆ. ಅಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಿದೆ.

ಎನ್.ಆರ್‌.ಕಾಲೊನಿಯ ಬಸ್‌ ನಿಲ್ದಾಣದ ಮೇಲಿನ ಮಹಡಿಯಲ್ಲಿ ಬಿಬಿಎಂಪಿ ಪ್ರೌಢಶಾಲೆ ಆರಂಭಿಸಲಾಗಿದೆ.

‘ಈಗಲಾದರೂ ಮೂಲ ಸೌಕರ್ಯ ಒದಗಿಸಿ’

‘ಕೋವಿಡ್‌ ಬಳಿಕ ಪೋಷಕರು ತಮ್ಮ ಮಕ್ಕಳನ್ನು ಬಿಬಿಎಂಪಿ ಶಾಲೆಗಳಿಗೆ ಸೇರಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಈಗಲಾದರೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು’.

‘ಸರ್ಕಾರವು ಸರ್ವರಿಗೂ ಕಡ್ಡಾಯ ಶಿಕ್ಷಣ ನೀಡುವುದಾಗಿ ಹೇಳುತ್ತಿದೆ. ಮಕ್ಕಳೇ ಶಾಲೆಗೆ ಹೋಗದಿದ್ದರೆ ಈ ಆಶಯ ಸಾಕಾರಗೊಳ್ಳುವುದಾದರೂ ಹೇಗೆ. ಕೆಲ ಬಿಬಿಎಂಪಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಸ್ವಚ್ಛತೆಯೇ ಮರೆಯಾಗಿದೆ. ಅಂತಹ ಶಾಲೆಗಳಿಗೆ ಹೋಗಲು ಮಕ್ಕಳು ಹಿಂದೇಟು ಹಾಕುತ್ತಾರೆ. ಕೆಲ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಕೆಲವೆಡೆ ಇದ್ದರೂ ಅವು ಬಳಕೆಗೆ ಯೋಗ್ಯವಾಗಿಲ್ಲ. ದುರ್ನಾತ ಬೀರುವ ಆ ಶೌಚಾಲಯಗಳಿಂದ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯವಿದೆ’.

‘ಕೆಲ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿಯೇ ಇಲ್ಲ. ಹೀಗಾಗಿ ಶಾಲಾ ಕೊಠಡಿಗಳ ಸ್ವಚ್ಛತೆಗೆ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿದೆ. ಇದು ತಪ್ಪಬೇಕು’.

- ದರ್ಶನ್‌, ಚಾಮರಾಜಪೇಟೆ ನಿವಾಸಿ

ಫಲ ನೀಡದ ರೋಶನಿ

ತನ್ನ ಅಧೀನದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು 21ನೇ ಶತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತೆ ಸಜ್ಜುಗೊಳಿಸಲು ಪಾಲಿಕೆಯು 2018ರಲ್ಲಿ ‘ಬಿಬಿಎಂಪಿ ರೋಶನಿ’ ಯೋಜನೆ ಜಾರಿಗೊಳಿಸಿತ್ತು.
ಕಲಿಕಾ ಸಮುದಾಯದ ಜಾಲ ರೂಪಿಸಿಕೊಂಡು ಗುಣಮಟ್ಟದ ಶಿಕ್ಷಣ ಒದಗಿಸುವ ಈ ಯೋಜನೆಗೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದರು.

ಮೈಕ್ರೊಸಾಫ್ಟ್‌ ಹಾಗೂ ಟೆಕ್‌ ಅವಂತ್‌ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿದ್ದ ಈ ಯೋಜನೆ ಫಲ ನೀಡಿದಂತೆ ಕಾಣುತ್ತಿಲ್ಲ. ಸಾಮಾಜಿಕ ಕಲಿಕಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಶಾಲೆಗಳನ್ನು ವಿಶ್ವದರ್ಜೆಗೇರಿಸುವ, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸುವ ಈ ಯೋಜನೆಯ ಆಶಯ ಮರೆಯಾದಂತಿದೆ. ಏಕೆಂದರೆ ಈಗಲೂ ಬಹುಪಾಲು ಶಾಲೆಗಳಿಗೆ ಡಿಜಿಟಲ್‌ ಬೋರ್ಡ್‌ಗಳು ಕಾಲಿಟ್ಟಿಲ್ಲ. ಇಂಟರ್‌ನೆಟ್‌ ಸಂಪರ್ಕವೂ ಇಲ್ಲ.

‘ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಕ್ರಮ’

‘ಪಾಲಿಕೆ ಅಧೀನದ ಶಾಲಾ, ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ವಿಶೇಷ ಆಯುಕ್ತರು ಈ ಕೆಲಸಕ್ಕಾಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಒಬ್ಬರನ್ನು ನೇಮಿಸಿದ್ದಾರೆ. ಅವರು ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಯಾವ ಶಾಲೆ ಹಾಗೂ ಕಾಲೇಜಿಗೆ ಹೆಚ್ಚುವರಿ ಕೊಠಡಿಯ ಅಗತ್ಯವಿದೆ, ಯಾವ ಕಟ್ಟಡಗಳನ್ನು ನವೀಕರಣಗೊಳಿಸಬೇಕು ಎಂಬುದರ ಕುರಿತು ವಿಶೇಷ ಆಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ’ ಎಂದು ಬಿಬಿಎಂಪಿ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು.

‘ಶಿವಾಜಿನಗರದ ಟಾಸ್ಕರ್‌ ಟೌನ್‌ನ ಶಾಲಾ ಆವರಣದಲ್ಲಿ ಯುವಕರು ಮದ್ಯಪಾನ, ಗಾಂಜಾ ಸೇವನೆ ಮಾಡುತ್ತಾರೆ ಎಂಬ ದೂರು ಕೇಳಿಬಂದಿತ್ತು. ಈ ಸಂಬಂಧ ಸ್ಥಳೀಯ ಠಾಣೆಗೆ ದೂರು ನೀಡಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ನೋಟಿಸ್‌ ಕೂಡ ನೀಡಲಾಗಿತ್ತು. ಬೇರೆ ಶಾಲೆಗಳಲ್ಲೂ ಈ ರೀತಿಯ ಸಮಸ್ಯೆ ಇದ್ದರೆ ಸಂಬಂಧಪಟ್ಟವರು ನಮ್ಮ ಗಮನಕ್ಕೆ ತರಬೇಕು. ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಸಾರಾಂಶ

ಚಾವಣಿಯಿಂದ ಪಟಪಟನೆ ಉದುರುವ ಮಳೆ ನೀರಿನ ಹನಿಗಳು. ಗೋಡೆಗಳ ಮೇಲೆ ಚಾಚಿರುವ ಪಾಚಿ. ಅಲ್ಲಲ್ಲಿ ಒಡೆದಿರುವ ಕಿಟಕಿ ಗಾಜುಗಳು. ಕಾಲಿಟ್ಟರೆ ಜಾರುವ ಸಿಮೆಂಟ್‌ ನೆಲ. ತುಕ್ಕು ಹಿಡಿದಿರುವ ಕಿಟಕಿಯ ಸರಳುಗಳು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.