ADVERTISEMENT

ಮಾಸ್ಕ್‌ ಧರಿಸದೇ ಓಡಾಟ: ದಂಡಾಸ್ತ್ರಕ್ಕೂ ಬಗ್ಗದ ನಾಗರಿಕರು

2020ರ ಮೇ ನಿಂದ ಈವರೆಗೆ 6.18 ಲಕ್ಷ ಮಂದಿಗೆ ದಂಡ

ಜಿ.ಶಿವಕುಮಾರ
Published 16 ಜನವರಿ 2022, 19:28 IST
Last Updated 16 ಜನವರಿ 2022, 19:28 IST
ಬಿಬಿಎಂಪಿ ಮಾರ್ಷಲ್‌ಗಳು ಮುಖಗವಸು ಧರಿಸದೆ ಓಡಾಡುತ್ತಿದ್ದ ಯುವಕನೊಬ್ಬನಿಗೆ ದಂಡ ವಿಧಿಸಿದರು –ಸಂಗ್ರಹ ಚಿತ್ರ
ಬಿಬಿಎಂಪಿ ಮಾರ್ಷಲ್‌ಗಳು ಮುಖಗವಸು ಧರಿಸದೆ ಓಡಾಡುತ್ತಿದ್ದ ಯುವಕನೊಬ್ಬನಿಗೆ ದಂಡ ವಿಧಿಸಿದರು –ಸಂಗ್ರಹ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್‌ ಹಾಗೂ ಓಮೈಕ್ರಾನ್‌ ಪ್ರಕರಣಗಳು ಏರುಗತಿಯಲ್ಲಿವೆ. ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಧರಿಸದವರಿಗೆ ದಂಡ ವಿಧಿಸುತ್ತಿದೆ. ಹೀಗಿದ್ದರೂ ನಾಗರಿಕರು ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ.  

ಮಾರುಕಟ್ಟೆ, ಬಸ್‌ ಹಾಗೂ ರೈಲು ನಿಲ್ದಾಣ, ಉದ್ಯಾನ, ಮಳಿಗೆಗಳಿಗೆ ಭೇಟಿ ನೀಡುವವರ ಮೇಲೆ ಬಿಬಿಎಂಪಿ ಮಾರ್ಷಲ್‌ಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ನಗರದಲ್ಲಿ 15 ದಿನಗಳಲ್ಲೇ (ಜ.1 ರಿಂದ 15) ಮುಖಗವಸು ಧರಿಸದ 14,273 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹35.68 ಲಕ್ಷ ದಂಡವನ್ನೂ ಸಂಗ್ರಹಿಸಿದ್ದಾರೆ.

‘ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ 100ರಷ್ಟು ಮಂದಿಯನ್ನು ಕರೆದೊಯ್ಯಲು ಸರ್ಕಾರ ಅನುಮತಿ ನೀಡಿದೆ. ಸಂಜೆ ಹಾಗೂ ಬೆಳಿಗ್ಗೆ ಸಮಯದಲ್ಲಿ ಬಸ್‌ಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಈ ಅವಧಿಯಲ್ಲಿ ಸೋಂಕು ಪರಸ್ಪರರಿಗೆ ಹರಡುವ ಅಪಾಯ ಹೆಚ್ಚು’ ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ಹೇಳಿದರು.

ADVERTISEMENT

‘ಕೋವಿಡ್‌ ಎರಡನೇ ಅಲೆಯನ್ನು ಜನರು ಲಘುವಾಗಿ ಪರಿಗಣಿಸಿದ್ದರು. ಅದರ ಪರಿಣಾಮ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ಆರೋಗ್ಯ ತುರ್ತುಪರಿಸ್ಥಿತಿ ಈಗ ಸೃಷ್ಟಿಯಾದರೆ ಅದನ್ನು ಎದುರಿಸಲು ರಾಜ್ಯದ ಯಾವ ಆಸ್ಪತ್ರೆಗಳೂ ಸಿದ್ಧವಾಗಿಲ್ಲ. ಹೀಗಾಗಿ ಜನ ನಿರ್ಲಕ್ಷ್ಯ ಬಿಟ್ಟು ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ರೀಗಲ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿ.ಸೂರಿ ರಾಜು ತಿಳಿಸಿದರು.

‘ಓಮೈಕ್ರಾನ್‌ ಪ್ರಕರಣಗಳು ಬೆಂಗಳೂರಿನಲ್ಲೇ ಅಧಿಕವಾಗಿವೆ. ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಇದು ರಾಜ್ಯದ ಇತರ ಜಿಲ್ಲೆಗಳಿಗೂ ವ್ಯಾಪಿಸಬಹುದು. ಹೀಗಾಗಿ ಪ್ರತಿಯೊಬ್ಬರೂ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಗಣಿಯ ಎಸಿಇ ಸುಹಾಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ಜಗದೀಶ್ ಹಿರೇಮಠ್ ಹೇಳಿದರು. 

***

ನಾನು ಆರೋಗ್ಯವಾಗಿದ್ದೇನೆ. ನನಗೆ ಏನೂ ಆಗದು ಎಂಬ ಮನಸ್ಥಿತಿ ಬಹುತೇಕರಲ್ಲಿದೆ. ಇಂಥವರು ಮಾಡುವ ತಪ್ಪಿಗೆ ಅವರ ಕುಟುಂಬದ ಸದಸ್ಯರು ಪರಿತಪಿಸಬೇಕಾಗುತ್ತದೆ

-ಡಾ.ಬಾಲಸುಂದರ್‌,  ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ)

***

ಮುಖಗವಸು ಧರಿಸದೆ ಇರುವವರ ವಿರುದ್ಧ ಜ.15ರಂದು ವಿವಿಧ ವಲಯಗಳಲ್ಲಿ ದಾಖಲಾದ ಪ್ರಕರಣ

ವಲಯ;ಪ್ರಕರಣ;ದಂಡ ಮೊತ್ತ (₹ಗಳಲ್ಲಿ)

ಪೂರ್ವ;108;27,000

ಪಶ್ಚಿಮ;162;40,500

ದಕ್ಷಿಣ;90;22,500

ಮಹದೇವಪುರ;37;9,250

ಆರ್‌.ಆರ್‌.ನಗರ;44;11,000

ಯಲಹಂಕ;21;5,250

ದಾಸರಹಳ್ಳಿ;20;5,000

ಬೊಮ್ಮನಹಳ್ಳಿ;51;12,750

***

ಮಾಸ್ಕ್‌ ಧರಿಸದವರಿಗೆ ದಂಡ– ವಿವರ

6,18,724

2020ರ ಮೇ ತಿಂಗಳಿಂದ 2022ರ ಜ.15ರ ಅವಧಿಯಲ್ಲಿ ಮಾರ್ಷಲ್‌ಗಳು ದಂಡ ವಿಧಿಸಿದ ಪ್ರಕರಣಗಳು

₹14.96 ಕೋಟಿ

ಈ ಅವಧಿಯಲ್ಲಿ ವಿಧಿಸಿರುವ ದಂಡದ ಮೊತ್ತ 

31,439

2021ರ ನವೆಂಬರ್‌ನಿಂದ 2022ರ ಜ.10ರ ಅವಧಿಯಲ್ಲಿ ಪೊಲೀಸರು ದಂಡ ವಿಧಿಸಿದ ಪ್ರಕರಣಗಳು

₹80.28 ಲಕ್ಷ

ಈ ಅವಧಿಯಲ್ಲಿ ಪೊಲೀಸರು ಸಂಗ್ರಹಿಸಿರುವ ದಂಡ ಮೊತ್ತ 

ಸಾರಾಂಶ

ಬೆಂಗಳೂರು: ನಗರದಲ್ಲಿ ಕೋವಿಡ್‌ ಹಾಗೂ ಓಮೈಕ್ರಾನ್‌ ಪ್ರಕರಣಗಳು ಏರುಗತಿಯಲ್ಲಿವೆ. ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಧರಿಸದವರಿಗೆ ದಂಡ ವಿಧಿಸುತ್ತಿದೆ. ಹೀಗಿದ್ದರೂ ನಾಗರಿಕರು ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ.   ಮಾರುಕಟ್ಟೆ, ಬಸ್‌ ಹಾಗೂ ರೈಲು ನಿಲ್ದಾಣ, ಉದ್ಯಾನ, ಮಳಿಗೆಗಳಿಗೆ ಭೇಟಿ ನೀಡುವವರ ಮೇಲೆ ಬಿಬಿಎಂಪಿ ಮಾರ್ಷಲ್‌ಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ನಗರದಲ್ಲಿ 15 ದಿನಗಳಲ್ಲೇ (ಜ.1 ರಿಂದ 15) ಮುಖಗವಸು ಧರಿಸದ 14,273 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹35.68 ಲಕ್ಷ ದಂಡವನ್ನೂ ಸಂಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.