ADVERTISEMENT

ಅಪಘಾತ ಸನ್ನಿವೇಶ ಸೃಷ್ಟಿಸಿ ಆರೋಪಿಗಳ ಸೆರೆ

ಕಂಪನಿ ವ್ಯವಸ್ಥಾಪಕನ ಅಪಹರಿಸಿ, ಸುಲಿಗೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 19:30 IST
Last Updated 12 ಅಕ್ಟೋಬರ್ 2021, 19:30 IST

ಬೆಂಗಳೂರು: ಕಂಪನಿಯೊಂದರ ವ್ಯವಸ್ಥಾಪಕ ಆರ್‌. ಶಿವಕುಮಾರ್ ಎಂಬುವರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿಯ ಸಿಲಿಕಾನ್ ಟೌನ್‌ನ ಸುನೀಲ್ (25), ಬನ್ನೇರುಘಟ್ಟದ ಕಗ್ಗಲೀಪುರ ಮುಖ್ಯರಸ್ತೆಯ ಜಿ. ಹರೀಶ್ (19) ಹಾಗೂ ಚನ್ನಪಟ್ಟಣ ತಾಲ್ಲೂಕಿನ ಸಾಮಂದಿಪುರದ ನವೀನ್ ಕುಮಾರ್ (25) ಬಂಧಿತರು. ಮೂವರಿಂದ ₹ 32,200 ನಗದು, ಚಾಕು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ನಿವಾಸಿ ಶಿವಕುಮಾರ್, ಮಾದನಾಯಕನಹಳ್ಳಿಯ ‘ಸಫಾರಿ ಇಂಡಸ್ಟ್ರೀಸ್ ಇಂಡಿಯಾ ಪ್ರೈ. ಲಿ.’ ಲಗೇಜು ತಯಾರಿಕೆ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅ. 8ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗಲೆಂದು ತುಮಕೂರು ರಸ್ತೆಯ ನೈಸ್ ರಸ್ತೆ ಜಂಕ್ಷನ್‌ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.’

ADVERTISEMENT

‘ಗೂಡ್ಸ್ ವಾಹನದಲ್ಲಿ ಬಂದಿದ್ದ ಆರೋಪಿಗಳು, ಹೊಸೂರು ಕಡೆ ಹೊರಟಿರುವುದಾಗಿ ಹೇಳಿ ಶಿವಕುಮಾರ್ ಅವರನ್ನು ಹತ್ತಿಸಿಕೊಂಡಿದ್ದರು. ಮಾರ್ಗಮಧ್ಯೆ ವಾಹನದಲ್ಲಿ ಶಿವಕುಮಾರ್ ಮೇಲೆ ದಾಳಿ ಮಾಡಿದ್ದ ಆರೋಪಿಗಳು, ಚಾಕುವಿನಿಂದ ದೇಹದ ಹಲವೆಡೆ ಚುಚ್ಚಿದ್ದರು. ಮೊಬೈಲ್, ಪಾನ್‌ ಕಾರ್ಡ್, ಡೆಬಿಟ್–ಕ್ರೆಡಿಟ್ ಕಾರ್ಡ್‌ ಕಸಿದುಕೊಂಡಿದ್ದರು. ಕಾರ್ಡ್ ಬಳಸಿ ಸಮೀಪದಲ್ಲಿದ್ದ ಎಟಿಎಂ ಯಂತ್ರದಲ್ಲಿ ₹ 43,000 ಡ್ರಾ ಮಾಡಿಕೊಂಡಿದ್ದರು. ನಡುರಸ್ತೆಯಲ್ಲೇ ಶಿವಕುಮಾರ್‌ ಅವರನ್ನು ಇಳಿಸಿ ಆರೋಪಿಗಳು ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶಿವಕುಮಾರ್, ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸರು ತಿಳಿಸಿದರು.

ದಟ್ಟಣೆ ಉಂಟು ಮಾಡಿ ಬಂಧನ: ‘ಡ್ರಾಪ್ ನೆಪದಲ್ಲಿ ಸಾರ್ವಜನಿಕರನ್ನು ವಾಹನದಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು, ನಿತ್ಯವೂ ನೈಸ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿ, ಅವರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದೆವು’ ಎಂದು ಪೊಲೀಸರು ಹೇಳಿದರು.

‘ಕನಕಪುರ ರಸ್ತೆ ಮೂಲಕ‌ವಾಗಿ ತಾಟಗುಪ್ಪೆ ಬಳಿ ಆರೋಪಿಗಳು ಗೂಡ್ಸ್ ವಾಹನದಲ್ಲಿ ಬರುತ್ತಿದ್ದ ಮಾಹಿತಿ ಸಿಕ್ಕಿತ್ತು. ರಸ್ತೆಯಲ್ಲಿ ಏಕಾಏಕಿ ವಾಹನ ಅಡ್ಡಗಟ್ಟಿದರೆ, ಆರೋಪಿಗಳು ಪರಾರಿಯಾಗುವ ಸಾಧ್ಯತೆ ಇತ್ತು. ಹೀಗಾಗಿ, ಅವರನ್ನು ಹಿಡಿಯಲು ಅಪಘಾತದ ಸನ್ನಿವೇಶ ಸೃಷ್ಟಿಸಬೇಕಾಯಿತು.’

‘ರಸ್ತೆಯಲ್ಲಿ ಅಪಘಾತವಾಗಿರುವುದಾಗಿ ಹೇಳಿ ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ದಟ್ಟಣೆ ಉಂಟಾಗಿ, ಎಲ್ಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆರೋಪಿಗಳ ವಾಹನ ಸಹ ದಟ್ಟಣೆಯಲ್ಲಿ ಸಿಲುಕಿತ್ತು. ಇದೇ ಸಂದರ್ಭದಲ್ಲೇ ವಾಹನ ಸುತ್ತುವರಿದು ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ವಿವರಿಸಿದರು.

ಸಾರಾಂಶ

ಕಂಪನಿಯೊಂದರ ವ್ಯವಸ್ಥಾಪಕ ಆರ್‌. ಶಿವಕುಮಾರ್ ಎಂಬುವರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.