ADVERTISEMENT

ಕ್ಯಾನ್ಸರ್ ಉಲ್ಬಣ: ಕಿದ್ವಾಯಿ ಹಾಸಿಗೆಗಳು ಭರ್ತಿ

ಕೋವಿಡ್ ನಿಯಂತ್ರಣದಿಂದ ಸಂಸ್ಥೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆ

ವರುಣ ಹೆಗಡೆ
Published 12 ಅಕ್ಟೋಬರ್ 2021, 20:53 IST
Last Updated 12 ಅಕ್ಟೋಬರ್ 2021, 20:53 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರರೋಗಿ ವಿಭಾಗ – ಪ್ರಜಾವಾಣಿ ಚಿತ್ರ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರರೋಗಿ ವಿಭಾಗ – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದಾಗಿ, ಕ್ಯಾನ್ಸರ್ ಚಿಕಿತ್ಸೆಗೆ ‌ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಸಂಸ್ಥೆಯಲ್ಲಿನ ಎಲ್ಲ 700 ಹಾಸಿಗೆಗಳೂ ಭರ್ತಿಯಾಗಿವೆ. 

ಮೂರು ತಿಂಗಳಿಂದ ಪ್ರತಿನಿತ್ಯ ಸರಾಸರಿ 1,200 ಹಳೆ ರೋಗಿಗಳು ಸಂಸ್ಥೆಗೆ ಭೇಟಿ ನೀಡುತ್ತಿದ್ದಾರೆ. 80ರಿಂದ 100 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಿಂದಾಗಿ ರೋಗಿಗಳ ನಿರ್ವಹಣೆ ಸಂಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ಕಳೆದ ವರ್ಷ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಸಂಸ್ಥೆಗೆ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆಗೆ ಬರುವವರ ಸಂಖ್ಯೆ ಇಳಿಕೆ ಕಂಡಿತ್ತು. ಕೋವಿಡ್ ಪೂರ್ವದಲ್ಲಿ ಪ್ರತಿನಿತ್ಯ ಸರಾಸರಿ 55 ಹೊಸ ಪ್ರಕರಣಗಳು ಸಂಸ್ಥೆಯಲ್ಲಿ ಪತ್ತೆಯಾಗುತ್ತಿದ್ದವು. ಕಳೆದ ವರ್ಷ ಕೋವಿಡ್‌ನಿಂದಾಗಿ ಕ್ಯಾನ್ಸರ್ ತಪಾಸಣೆ ಶಿಬಿರಗಳು ನಡೆದಿರಲಿಲ್ಲ. ಆಸ್ಪತ್ರೆಗಳಲ್ಲಿಯೂ ಕೋವಿಡ್ ಚಿಕಿತ್ಸೆಗೆ ಆದ್ಯತೆ ನೀಡಲಾಗಿತ್ತು. ಇದರಿಂದಾಗಿ ಸಂಸ್ಥೆಯಲ್ಲಿ ದಿನವೊಂದಕ್ಕೆ ದಾಖಲಾಗುತ್ತಿದ್ದ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 37ಕ್ಕೆ ಇಳಿಕೆಯಾಗಿತ್ತು. 

ADVERTISEMENT

ಕೋವಿಡ್ ಎರಡನೇ ಅಲೆಯು ನಿಯಂತ್ರಣಕ್ಕೆ ಬಂದಿರುವುದರಿಂದ ಕಳೆದ ಮೂರು ತಿಂಗಳಿಂದ ಕ್ಯಾನ್ಸರ್ ತಪಾಸಣಾ ಶಿಬಿರಗಳು ಪುನರಾರಂಭವಾಗಿವೆ. ಮೊಬೈಲ್ ವಾಹನಗಳ ಮೂಲಕವೂ ತಪಾಸಣೆ ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಪ್ರಕರಣಗಳ ಜೊತೆಗೆ ಚಿಕಿತ್ಸೆಗೆ ಬರುವ ಹಳೆ ರೋಗಿಗಳ ಸಂಖ್ಯೆಯೂ ಏರುಮುಖಪಡೆದಿದೆ. 

ತಪಾಸಣೆಯಿಂದ ದೃಢ: ‘ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಇಳಿಕೆಯಾಗಿತ್ತು. ಈ ಅವಧಿಯಲ್ಲಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಜನರು ಅಷ್ಟಾಗಿ ಮುಂದೆ ಬರಲಿಲ್ಲ. ಈಗ ತಪಾಸಣೆಗೆ ಒಳಪಡುತ್ತಿರುವುದರಿಂದ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು. 

‘ರಾಜ್ಯದ ವಿವಿಧೆಡೆ ಕಿದ್ವಾಯಿಯ ಪ್ರಾದೇಶಿಕ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಬೆಂಗಳೂರಿನ ಉತ್ತರದಲ್ಲಿ ಸಂಸ್ಥೆಯ ಸಂಶೋಧನೆ ಮತ್ತು ಉಪಶಾಮಕ ಚಿಕಿತ್ಸೆ ಕೇಂದ್ರ ಸ್ಥಾಪನೆಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿನ ರೋಗಿಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಕ್ಯಾನ್ಸರ್ ಪೀಡಿತರು ಚಿಕಿತ್ಸೆಗೆ ಬರುತ್ತಾರೆ. ಹೀಗಾಗಿ, ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ’ ಎಂದರು. 

ಸಂಸ್ಥೆಯ ಕ್ಯಾನ್ಸರ್ ನೋಂದಣಿ ಪ್ರಕಾರ 1984ರಿಂದ 2020ರ ಅವಧಿಯಲ್ಲಿ ಒಟ್ಟು 4,19,052 ಮಂದಿ ಕ್ಯಾನ್ಸರ್ ಶಂಕೆಯಿಂದ ದಾಖಲಾಗಿದ್ದಾರೆ. ಇವರಲ್ಲಿ 2,45,797 ಮಂದಿ ಕ್ಯಾನ್ಸರ್ ಪೀಡಿತರಾಗಿರುವುದು ದೃಢಪಟ್ಟಿದೆ. 

ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಕ್ಸಾನ್ಸರ್

ವಿಧ; ಪ್ರಮಾಣ (%)

ಬಾಯಿ ಕ್ಯಾನ್ಸರ್; 16.38

ಗಂಟಲು ಕ್ಯಾನ್ಸರ್; 9.37

ಶ್ವಾಸಕೋಶ ಕ್ಯಾನ್ಸರ್; 8.77

ಅನ್ನನಾಳ ಕ್ಯಾನ್ಸರ್; 5.98

ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಕ್ಸಾನ್ಸರ್

ವಿಧ; ಪ್ರಮಾಣ (%)

ಗರ್ಭಕಂಠದ ಕ್ಯಾನ್ಸರ್; 22.58

ಸ್ತನ ಕ್ಯಾನ್ಸರ್; 19.23

ಬಾಯಿ ಕ್ಯಾನ್ಸರ್; 10.76

ಅಂಡಾಶಯದ ಕ್ಯಾನ್ಸರ್; 6.73

ಸಂಸ್ಥೆಯಲ್ಲಿ ನೋಂದಣಿಯಾದ ಪ್ರಕರಣಗಳು

ವರ್ಷ; ಪ್ರಕರಣಗಳು

2016; 17,035

2017; 17,874

2018; 18,990

2019; 19,764

2020; 13,793

2021 (ಅ.12); 12,925

***

ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಕ್ಯಾನ್ಸರ್ ತಪಾಸಣೆಯನ್ನು ಎಲ್ಲೆಡೆ ನಡೆಸಲಾಗುತ್ತಿದೆ. ಇದರಿಂದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ

- ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಸಾರಾಂಶ

ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದಾಗಿ, ಕ್ಯಾನ್ಸರ್ ಚಿಕಿತ್ಸೆಗೆ ‌ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಸಂಸ್ಥೆಯಲ್ಲಿನ ಎಲ್ಲ 700 ಹಾಸಿಗೆಗಳೂ ಭರ್ತಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.