ADVERTISEMENT

ಉದ್ಘಾಟನೆಗಾಗಿ ವರ್ಷದಿಂದ ಕಾಯುತ್ತಿದೆ ಬೈಯಪ್ಪನಹಳ್ಳಿ ಟರ್ಮಿನಲ್

ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯೂ ಪೂರ್ಣ: ಸಚಿವಾಲಯದ ಅನುಮತಿಗೆ ಕಾದಿರುವ ನೈರುತ್ಯ ರೈಲ್ವೆ

ವಿಜಯಕುಮಾರ್ ಎಸ್.ಕೆ.
Published 15 ಜನವರಿ 2022, 19:30 IST
Last Updated 15 ಜನವರಿ 2022, 19:30 IST
ಬೈಯಪ್ಪನಹಳ್ಳಿ ಟರ್ಮಿನಲ್ ಬಳಿ ನಿರ್ಮಾಣವಾಗಿರುವ ಸಂಪರ್ಕ ರಸ್ತೆ
ಬೈಯಪ್ಪನಹಳ್ಳಿ ಟರ್ಮಿನಲ್ ಬಳಿ ನಿರ್ಮಾಣವಾಗಿರುವ ಸಂಪರ್ಕ ರಸ್ತೆ   

ಬೆಂಗಳೂರು: ವಿಮಾನ ನಿಲ್ದಾಣದ ಮಾದರಿಯ ಮೂಲಸೌಕರ್ಯದೊಂದಿಗೆ ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಾಮಗಾರಿ ಮುಗಿದು ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಇದರ ಉದ್ಘಾಟನೆಗೆ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ.

ಬೈಯಪ್ಪನಹಳ್ಳಿ ಹಳೇ ರೈಲು ನಿಲ್ದಾಣ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ರೈಲು ನಿಲ್ದಾಣ ಚಿಟ್ಟೆಯಾಕಾರದಲ್ಲಿ ನಿರ್ಮಾಣವಾಗಿದೆ. ನೈರುತ್ಯ ರೈಲ್ವೆ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ದಾಖಲಿಸುತ್ತಿರುವ ಈ ಟರ್ಮಿನಲ್, ವಿಮಾನ ನಿಲ್ದಾಣವನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೆಂಗಳೂರಿನ ರೈಲ್ವೆ ಇತಿಹಾಸದಲ್ಲೇ ಇದು ಹೊಸ ಮೈಲಿಗಲ್ಲು.

ವಾಹನಗಳ ನಿಲುಗಡೆಗೆ ವಿಶಾಲವಾದ ತಾಣ, ‌ಕಾರಂಜಿಯನ್ನು ಒಳಗೊಂಡ ಸಣ್ಣ ಉದ್ಯಾನ, ಅದರ ಪಕ್ಕದಲ್ಲಿ ‘ಐ ಲವ್ ಬೆಂಗಳೂರು’ ಎಂಬ ಆಕರ್ಷಕವಾದ ಫಲಕಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕ ರೈಲುಗಳಿಗೆ 7 ಪ್ಲಾಟ್‌ಫಾರಂಗಳು, ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂ ತಲುಪಲು ಸಬ್‌ವೇ ಮತ್ತು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೆಟ್ರೊ ರೈಲು ನಿಲ್ದಾಣಗಳ ಮಾದರಿಯಲ್ಲಿ ಎಲ್ಲ ಪ್ಲಾಟ್‌ಫಾರಂಗಳಿಗೂ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗಿದೆ.

ADVERTISEMENT

ಇಷ್ಟೆಲ್ಲಾ ಸುಸಜ್ಜಿತ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಈ ನಿಲ್ದಾಣ ಸುತ್ತಮುತ್ತಲ ಜನರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 2015–16ನೇ ಸಾಲಿನಲ್ಲಿ ಈ ನಿಲ್ದಾಣದ ಕಾಮಗಾರಿಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿತ್ತು. 2017ರಿಂದ ಕಾಮಗಾರಿ ಆರಂಭವಾಗಿತ್ತು.

ಕಾಮಗಾರಿ ಪೂರ್ಣಗೊಂಡರೂ ಈ ನಿಲ್ದಾಣಕ್ಕೆ ಸಂಪರ್ಕ ರಸ್ತೆಯದ್ದೇ ದೊಡ್ಡ ಸಮಸ್ಯೆಯಾಗಿತ್ತು. ರೈಲ್ವೆ ನಿಲ್ದಾಣ ನಿರ್ಮಾಣ ಮಾಡುವ ಸಂದರ್ಭದಲ್ಲೇ ಸಂಪರ್ಕ ರಸ್ತೆ ಬಗ್ಗೆಯೂ ಆಲೋಚಿಸಿ ರಸ್ತೆ ನಿರ್ಮಿಸಿಕೊಂಡಿದ್ದರೆ ಒಂದು ವರ್ಷಕ್ಕೂ ಮೊದಲೇ ರೈಲ್ವೆ ನಿಲ್ದಾಣ ಕಾರ್ಯಾರಂಭ ಆಗಬೇಕಿತ್ತು. ನಿಲ್ದಾಣದ ಕಾಮಗಾರಿ ಮುಗಿದ ಬಳಿಕ ಸಂಪರ್ಕ ರಸ್ತೆ ಬಗ್ಗೆ ಆಲೋಚನೆ ಮಾಡಲಾಗಿದೆ. ಮೂಲಸೌಕರ್ಯ ಒದಗಿಸಬೇಕಾದ ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಇಲ್ಲ. ಸಮಗ್ರ ಯೋಜನೆ ರೂಪಿಸಿಕೊಳ್ಳದೆಯೇ ಕಾಮಗಾರಿ ನಿರ್ವಹಿಸುತ್ತಿರುವುದಕ್ಕೆ ಇದೂ ಒಂದು ಉದಾಹರಣೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

‘ಸಂಪರ್ಕ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ಬಿಬಿಎಂಪಿ ಇತ್ತೀಚೆಗೆ ಪೂರ್ಣಗೊಳಿಸಿದೆ. ಉದ್ಘಾಟನೆಗೆ ಯಾವುದೇ ರೀತಿಯ ತಾಂತ್ರಿಕ ತೊಡಕುಗಳೂ ಇಲ್ಲ. ರೈಲ್ವೆ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ಪ್ರತಿಕ್ರಿಯೆ ಬಂದರೆ ದಿನಾಂಕ ನಿಗದಿ ಮಾಡಿ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕೋವಿಡ್ ಕಾರಣ, ಚುನಾವಣೆಗಳ ಮೇಲೆ ಚುನಾವಣೆಗಳ ನಿಗದಿ ಆಗಿರುವುದರಿಂದ ಇನ್ನೂ ಎರಡು ಮೂರು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಖುದ್ದು ಸ್ಥಳಕ್ಕೆ ಬಂದು ರೈಲು ನಿಲ್ದಾಣಕ್ಕೆ ಚಾಲನೆ ನೀಡಬೇಕಿಲ್ಲ. ರೈಲ್ವೆ ಸಚಿವರು ದೆಹಲಿಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಚಾಲನೆ ನೀಡಿದರೂ ಸಾಕು. ರೈಲು ನಿಲ್ದಾಣ ಆದಷ್ಟು ಬೇಗ ಪ್ರಯಾಣಿಕರಿಗೆ ಲಭ್ಯವಾಗಬೇಕು’ ಎಂದು ರೈಲ್ವೆ ಹೋರಾಟಗಾರ ಅಭಿಷೇಕ್ ಒತ್ತಾಯಿಸಿದರು.

ರೈಲು ನಿಲ್ದಾಣದ ಉದ್ಘಾಟನೆ ಸಂದರ್ಭದಲ್ಲಿ ಈ ನಿಲ್ದಾಣದಿಂದ ಹೊರಡುವ ಹೊಸದೊಂದು ರೈಲಿಗೆ ಚಾಲನೆ ನೀಡುವ ಉದ್ದೇಶವನ್ನೂ ರೈಲ್ವೆ ಇಲಾಖೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

‘ಶೀಘ್ರವೇ ರೈಲ್ವೆ ಅಧಿಕಾರಿಗಳ ಜತೆ ಸಭೆ’

ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಉದ್ಘಾಟನೆ ಸಂಬಂಧ ಶೀಘ್ರವೇ ರೈಲ್ವೆ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು.

‘ಈ ಹಿಂದೆ ರೈಲ್ವೆ ಸಚಿವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ರೈಲು ನಿಲ್ದಾಣಕ್ಕೆ ಅಗತ್ಯ ಇದ್ದ ಸಂಪರ್ಕ ರಸ್ತೆಯ ಬಗ್ಗೆ ಮನವರಿಕೆ ಮಾಡಿಸಿದ್ದೆವು. ಈಗ ಸಂಪರ್ಕ ರಸ್ತೆ ಕೂಡ ಅಭಿವೃದ್ಧಿಗೊಂಡಿದೆ. ಸದ್ಯದಲ್ಲೇ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದೇವೆ’ ಎಂದರು.

ಹೊಸ ಟರ್ಮಿನಲ್‌: ಪ್ರಯೋಜನಗಳೇನು?

* ವೈಟ್‌ಫೀಲ್ಡ್, ಕೆ.ಆರ್‌.ಪುರ, ಮಹದೇವಪುರ, ಬೈಯಪ್ಪನಹಳ್ಳಿ ಪ್ರಯಾಣಿಕರಿಗೆ ಈ ನಿಲ್ದಾಣ ತುಂಬಾ ಸಮೀಪ

* ಯಶವಂತಪುರ–ಕೆಎಸ್‌ಆರ್‌ ರೈಲು ನಿಲ್ದಾಣದ ಮೇಲಿನ ಒತ್ತಡ ನಿವಾರಣೆ

* ಹೊಸ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಲು ಅವಕಾಶ

* ಉಪನಗರ ಸಂಪರ್ಕಿಸುವ ಮೆಮು ರೈಲುಗಳ ಸಂಖ್ಯೆ ಹೆಚ್ಚಿಸಲು ಅವಕಾಶ

* ಹಳಿಗಳ ದುರಸ್ತಿ ಸಂದರ್ಭದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸದೆ ನಿರ್ವಹಣೆ ಮಾಡಬಹುದು

* ತಡೆರಹಿತವಾಗಿ ಸರಕು ಸಾಗಣೆ ರೈಲುಗಳ ಕಾರ್ಯಾಚರಣೆಗೂ ಅನುಕೂಲ

ಅಂಕಿ–ಅಂಶ

₹240 ಕೋಟಿ: ಟರ್ಮಿನಲ್ ನಿರ್ಮಾಣಕ್ಕೆ ತಗುಲಿದ ವೆಚ್ಚ

7: ಪ್ಲಾಟ್‌ಫಾರಂಗಳ ಸಂಖ್ಯೆ

600 ಮೀಟರ್: ಪ್ಲಾಟ್‌ಫಾರಂ ಉದ್ದ

137: ಸಿಗ್ನಲ್‌ಗಳ ಸಂಖ್ಯೆ

ಸಾರಾಂಶ

ವಿಮಾನ ನಿಲ್ದಾಣದ ಮಾದರಿಯ ಮೂಲಸೌಕರ್ಯದೊಂದಿಗೆ ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಾಮಗಾರಿ ಮುಗಿದು ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಇದರ ಉದ್ಘಾಟನೆಗೆ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.