ADVERTISEMENT

ರಸ್ತೆ ಅಗೆಯಲು ಅನುಮತಿ ಕಡ್ಡಾಯ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:54 IST
Last Updated 11 ಅಕ್ಟೋಬರ್ 2021, 19:54 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ‘ನಗರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ಅಗೆಯಲು ಪಾಲಿಕೆಯ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಹಾಗೂ ಬಿಎಂಆರ್‌ಸಿಎಲ್(ಬೆಂಗಳೂರು ಮೆಟ್ರೊ ರೈಲು ನಿಗಮ) ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿದ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಎಲ್ಲಾ ಇಲಾಖೆಗಳು ಸಹಕರಿಸಬೇಕು’ ಎಂದರು.

ಜಲ ಮಂಡಳಿಯಿಂದ 110 ಹಳ್ಳಿ ಯೋಜನೆಯಡಿ ಕಾವೇರಿ ಕುಡಿಯುವ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ಅಗೆದು, ಕಾಮಗಾರಿ ಪೂರ್ಣಗೊಂಡಿರುವ ಕುರಿತಂತೆ ಪಾಲಿಕೆಗೆ ವರದಿ ಸಲ್ಲಿಸಿಲ್ಲ. ಇದರಿಂದ ಪಾಲಿಕೆಯಿಂದ ರಸ್ತೆ ಪುನರ್ ಸ್ಥಾಪಿಸಲು ವಿಳಂಬವಾಗುತ್ತಿದೆ. ಈ ಸಂಬಂಧ ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂಬುದನ್ನು ನಕ್ಷೆ ಮೂಲಕ ವರದಿಯನ್ನು ಪಾಲಿಕೆಗೆ ನೀಡಬೇಕು. ಸಮನ್ವಯ ಸಾಧಿಸಲು ಜಲ ಮಂಡಳಿಯಿಂದ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಬೆಸ್ಕಾಂನಿಂದ ವಿದ್ಯುತ್ ಸಂಪರ್ಕಕ್ಕೆ ಕೇಬಲ್ ಅಳವಡಿಸಿ ತಕ್ಷಣವೇ ಪರೀಕ್ಷಿಸದೇ ಇರುವುದರಿಂದ ರಸ್ತೆ ಪುನರ್ ನಿರ್ಮಾಣ ವಿಳಂಬವಾಗುತ್ತಿದೆ. ಕೇಬಲ್ ಅಳವಡಿಕೆಯ ನಂತರ ತಕ್ಷಣವೇ ಪರೀಕ್ಷೆ ಕೈಗೊಂಡು ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ವರದಿ ಸಲ್ಲಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಮೆಟ್ರೊ ಕಾಮಗಾರಿ ಕೈಗೊಂಡ ಪ್ರದೇಶದಲ್ಲಿ ರಸ್ತೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶೇಷ ಆಯುಕ್ತ(ಯೋಜನೆ) ಮನೋಜ್, ಜಲಮಂಡಳಿ ಅಧ್ಯಕ್ಷ ಜಯರಾಮ್‌, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಭಾಕರ್, ಮುಖ್ಯ ಎಂಜಿನಿಯರ್(ರಸ್ತೆ ಮೂಲಭೂತ ಸೌಕರ್ಯ) ಬಿ.ಎಸ್‌. ಪ್ರಹ್ಲಾದ್ ಇದ್ದರು.

ಸಾರಾಂಶ

‘ನಗರದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ಅಗೆಯಲು ಪಾಲಿಕೆಯ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.