ADVERTISEMENT

ಕೆಟಿಸಿಪಿ ಕಾಯ್ದೆ ತಿದ್ದುಪಡಿ, ಅವ್ಯವಹಾರಕ್ಕೆ ರಹದಾರಿ?

ಕೊಡಿಯಾಲಕರೇನಹಳ್ಳಿ ಟಿಡಿಆರ್‌ ಬಿಕ್ಕಟ್ಟು ಬಗೆಹರಿಸುವ ನೆಪದಲ್ಲಿ ಕಾಯ್ದೆ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 4:46 IST
Last Updated 10 ಅಕ್ಟೋಬರ್ 2021, 4:46 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯು ಕಸ ವಿಲೇವಾರಿಗಾಗಿ ರಾಮನಗರ ಜಿಲ್ಲೆಯ ಕೊಡಿಯಾಲಕರೇನಹಳ್ಳಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸುವ ನೆಪದಲ್ಲಿ ಸರ್ಕಾರವು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಕೆಟಿಸಿಪಿ) ಕಾಯ್ದೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಅವ್ಯವಹಾರಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಕಾಯ್ದೆಯ ಸೆಕ್ಷನ್ 4 (9) ರದ್ದುಪಡಿಸಿ ಟಿಡಿಆರ್‌ ಅನ್ನು ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಾಚೆಯಲ್ಲೂ ಮಾರಾಟ ಮಾಡಲು ಅಥವಾ ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಬೆಂಗಳೂರು– ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಎಂಐಸಿಪಿಎ) ವ್ಯಾಪ್ತಿಯ
ಲ್ಲಿರುವ ರಾಮನಗರ ಜಿಲ್ಲೆಯ ಕೊಡಿಯಾಲಕರೇನಹಳ್ಳಿ ಗ್ರಾಮದಲ್ಲಿ 40 ಎಕರೆ 9 ಗುಂಟೆ ಜಾಗವನ್ನು ಕಸ ವಿಲೇವಾರಿ ಸಲುವಾಗಿ ಬಳಸುವ ಬಗ್ಗೆ ಬಿಬಿಎಂಪಿಯು 2011ರ ಜೂನ್‌ 08ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ADVERTISEMENT

ಸಂಪುಟ ಸಮಿತಿಯ ಅನುಮೋದನೆ ಪಡೆಯುವ ಷರತ್ತಿನ ಮೇರೆಗೆ, ಟಿಡಿಆರ್ ಮೂಲಕ ಈ ಜಾಗ ಸ್ವಾಧೀನಪಡಿಸಿಕೊಳ್ಳಲು 2013ರ ಜ.3ರಂದು ಸರ್ಕಾರ ಆದೇಶ ಹೊರಡಿಸಿತು. ಅದರ ಪ್ರಕಾರ ಕೊಡಿಯಾಲಕರೇನಹಳ್ಳಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಆ ಟಿಡಿಆರ್‌ ಬಳಸಬಹುದಾಗಿತ್ತು.

ಬಿಬಿಎಂಪಿಯು 4 ಎಕರೆ 9 ಗುಂಟೆ ಜಾಗದ ಸ್ವಾಧೀನಕ್ಕೆ ಸಂಬಂಧಿಸಿ ಭೂಮಾಲೀಕರಿಂದ ಹಕ್ಕುಪರಿತ್ಯಾಗ ಪತ್ರಗಳನ್ನು ಪಡೆದು 2013ರ ಮಾರ್ಚ್‌ 12ರಂದು ಅಭಿವೃದ್ಧಿ ಹಕ್ಕು ಪ್ರಮಾಣಪತ್ರಗಳನ್ನು (ಡಿಆರ್‌ಸಿ) ವಿತರಿಸಿತು. ಈ ಜಾಗವು ಬಿಎಂಐಸಿಪಿಎ ವ್ಯಾಪ್ತಿಯಲ್ಲಿ ಇರುವುದರಿಂದ ಅವರೇ ಟಿಡಿಆರ್‌ಸಿ ವಿತರಿಸಬೇಕಿತ್ತು. ಈ ವಿಚಾರದಲ್ಲಿ ಲೋಪ ಉಂಟಾಗಿತ್ತು. 

ಡಿಆರ್‌ಸಿಗಳನ್ನು ಭೂಮಾಲೀಕರು ವೆಂಕಟೇಶ್ವರ ಡೆವೆಲಪರ್ಸ್‌ ಮತ್ತು ಬಾಲಾಜಿ ಇನ್‌ಫ್ರಾಸ್ಟ್ರಕ್ಷರ್ ಆ್ಯಂಡ್‌ ಡೆವಲಪರ್ಸ್‌ ಸಂಸ್ಥೆಗಳಿಗೆ ಮಾರಾಟ ಮಾಡಿದ್ದರು. ಡಿಆರ್‌ಸಿ ಬಳಸಿಕೊಳ್ಳುವ ಸಲುವಾಗಿ ಈ ಸಂಸ್ಥೆಗಳು ಸಂಪರ್ಕಿಸಿದಾಗ ಬಿಬಿಎಂಪಿಗೆ ತನ್ನ ತಪ್ಪಿನ ಅರಿವಾಗಿತ್ತು. 4 ಎಕರೆ 9 ಗುಂಟೆ ಭೂಸ್ವಾಧೀನಕ್ಕಾಗಿ ವಿತರಿಸಿದ್ದ ಡಿಆರ್‌ಸಿಗಳನ್ನು ಪಾಲಿಕೆ ರದ್ದುಪಡಿಸಿತು. ಇನ್ನುಳಿದ 36 ಎಕರೆ ಜಾಗಕ್ಕೆ ಡಿಆರ್‌ಸಿಗಳನ್ನು ಬಿಎಂಐಸಿಪಿಎ ವಿತರಿಸಿದೆ. ಈ ನಡುವೆ ಟಿಡಿಆರ್‌ ಖರೀದಿಸಿದ ಸಂಸ್ಥೆಗಳು ಹೈಕೋರ್ಟ್‌ ಮೊರೆ ಹೋಗಿವೆ. 2017ರಲ್ಲಿ ಸರ್ಕಾರ ಬಿಕ್ಕಟ್ಟು ಬಗೆಹರಿಸುವ ಭರವಸೆ ನೀಡಿದ್ದರಿಂದ ಅವರು ಮೊಕದ್ದಮೆ ಹಿಂಪಡೆದರು. 

2016ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಕೆಟಿಸಿಪಿ) ಕಾಯ್ದೆಯ (ಅಭಿವೃದ್ಧಿ ಹಕ್ಕುಗಳ ಪ್ರಯೋಜನಗಳು) ನಿಯಮ 4 (9)ರ ಪ್ರಕಾರ ಜಾಗಕ್ಕೆ ಟಿಡಿಆರ್‌ ನೀಡಿರುವ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಡಿಆರ್‌ಸಿಗಳನ್ನು ಬಳಸಬೇಕಾಗಿದೆ. 

ಯಾವುದೇ ಪ್ರದೇಶದಲ್ಲೂ ಟಿಡಿಆರ್ ಬಳಕೆಗೆ ಅವಕಾಶ
ಕೊಡಿಯಾಲಕರೇನಹಳ್ಳಿ ಗ್ರಾಮದ ಜಾಗ ಸ್ವಾಧೀನಕ್ಕೆ 2011ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವೂ 25 ಕಿ.ಮೀ ವ್ಯಾಪ್ತಿಯ ಯಾವೆಲ್ಲ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಒಳಗೊಳ್ಳುತ್ತದೆ ಎಂಬ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಲಿಲ್ಲ. ಬಿಬಿಎಂಪಿಯ ಒಟ್ಟು ವಿಸ್ತೀರ್ಣದಲ್ಲಿ (741 ಚ.ಕಿ.ಮೀ) 708 ಚ.ಕಿ.ಮೀ ಪ್ರದೇಶವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧೀನದಲ್ಲಿ ಬರುತ್ತದೆ. ಇನ್ನುಳಿದ 33 ಚ.ಕಿ.ಮೀ ಪ್ರದೇಶವು ಬಿಎಂಐಸಿಪಿಎ ವ್ಯಾಪ್ತಿಯಲ್ಲಿದೆ. ಈ 33 ಚ.ಕಿ.ಮೀ ಪ್ರದೇಶವು ಬಿಬಿಎಂಪಿ ಹಾಗೂ ಬಿಎಂಐಸಿಪಿಎ ವ್ಯಾಪ್ತಿಯಲ್ಲಿದೆ. ಬಿಎಂಐಸಿಪಿಎ ಅಧೀನದ ಈ ಜಾಗವನ್ನು ಹೊರತಾಗಿ ಬೇರೆ ಕಡೆ ಡಿಆರ್‌ಸಿ ಬಳಸುವುದಕ್ಕೆ ಅವಕಾಶ ಇಲ್ಲ. 2016ರ ಕೆಟಿಸಿಪಿ ಕಾಯ್ದೆ (ಅಭಿವೃದ್ಧಿ ಹಕ್ಕುಗಳ ಪ್ರಯೋಜನಗಳು) ನಿಯಮಗಳು ಪೂರ್ವಾನ್ವಯವಾಗುತ್ತವೆ. 2015ಕ್ಕೆ ಮುನ್ನ ವಿತರಿಸಲಾದ ಡಿಆರ್‌ಸಿಗಳನ್ನೂ ಕೆಟಿಸಿಪಿ ಕಾಯ್ದೆಯ ನಿಯಮ 9ರ ಪ್ರಕಾರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಬಳಸಬೇಕಾಗುತ್ತದೆ.  

ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರವು ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ ತಂದು ಉಪಸೆಕ್ಷನ್‌ 4(9) ಅನ್ನು ಕೈಬಿಡಲು ಮಸೂದೆಯನ್ನು ಮಂಡಿಸಿತ್ತು. ಉಪಸೆಕ್ಷನ್‌ 5 (13ರಲ್ಲಿ ‘ಅಭಿವೃದ್ಧಿ ಹಕ್ಕುಗಳನ್ನು ಸ್ಥಳೀಯ ಯೋಜನಾ ಪ್ರಾಧಿಕಾರದಲ್ಲಿ ನಿಯಮಿಸಲಾದಂತೆ ಅಥವಾ ಸರ್ಕಾರವು ಅಧಿಸೂಚಿಸಿದಂತೆ ಯಾವುದೇ ಪ್ರದೇಶದಲ್ಲಿ ಮಾರಾಟ ಮಾಡಬಹುದು ಅಥವಾ ಬಳಸಿಕೊಳ್ಳಬಹುದು’ ಎಂದು ತಿದ್ದು‍ಪಡಿ ಸೂಚಿಸಿತ್ತು. ಈ ತಿದ್ದುಪಡಿ ಮಸೂದೆಯು ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದು, ರಾಜ್ಯಪಾಲರ ಅಂಕಿತ ಹಾಕುವುದು ಬಾಕಿ ಇದೆ. ಇದು ಜಾರಿಗೆ ಬಂದಿದ್ದೇ ಆದರೆ, ಅಭಿವೃದ್ಧಿ ಹಕ್ಕನ್ನು ಸ್ಥಳೀಯ ಯೋಜನಾ ಪ್ರಾಧಿಕಾರದ ಹೊರಗೆ ಯಾವುದೇ ಸ್ಥಳದಲ್ಲಿ ಬಳಸುವುದಕ್ಕೂ ಅವಕಾಶ ಕಲ್ಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಬಹುದು.

 ‘ಅನಿಯಮಿತ ಅಭಿವೃದ್ಧಿಗೆ ದಾರಿ’
‘ಟಿಡಿಆರ್‌ ಅನ್ನು ಸ್ಥಳೀಯ ಯೋಜನಾ ಪ್ರಾಧಿಕಾರದ ಆಚೆಗಿನ ಪ್ರದೇಶಗಳಲ್ಲೂ ಬಳಸುವುದಕ್ಕೆ ಅವಕಾಶ ಕಲ್ಪಿಸುವುದು ಅಪಾಯಕಾರಿ. ಎರಡು ಸ್ಥಳೀಯ ಯೋಜನಾ ಪ್ರಾಧಿಕಾರಗಳ ಜಮೀನುಗಳ ಮೌಲ್ಯದಲ್ಲಿ ಅಗಾಧ ವ್ಯತ್ಯಾಸವಿದ್ದರೂ ಕೆಟಿಸಿಪಿ ಕಾಯ್ದೆ ತಿದ್ದುಪಡಿಯ ನಂತರ ಎಲ್ಲ ಯೋಜನಾ ಪ್ರಾಧಿಕಾರದ ಒಂದೇ ವಿಸ್ತೀರ್ಣದ ಜಮೀನುಗಳೂ ಒಂದೇ ದರ ಹೊಂದಿರಲಿವೆ. ಇದು ಅನಿಯಮಿತ ಅಭಿವೃದ್ಧಿಗೆ ಕಾರಣವಾಗುತ್ತದೆ. ಜೊತೆಗೆ ಭಾರಿ ಅಕ್ರಮಗಳಿಗೂ ದಾರಿ ಮಾಡಿಕೊಡಲಿದೆ’ ಎಂದು ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

‘ಕೊಡಿಯಾಲಕರೇನಹಳ್ಳಿ ಗ್ರಾಮದ ಆಸುಪಾಸಿನಲ್ಲಿ 40 ಎಕರೆ ಜಾಗಕ್ಕೆ ಪ್ರಸ್ತುತ ₹ 10.8 ಕೋಟಿ ಮೌಲ್ಯವಿದೆ. ಕೆಟಿಸಿಪಿ ತಿದ್ದುಪಡಿ ಮಸೂದೆ ಜಾರಿಯಾದರೆ, ಅದರ ಪ್ರಕಾರ ನೀಡಿದ ಟಿಡಿಆರ್‌ ಅನ್ನು ಬಿಎಂಐಸಿಪಿಎ ವ್ಯಾಪ್ತಿಯಲ್ಲಿ ಬಳಸಿದರೆ ಅದರ ಮೌಲ್ಯ ₹20.6 ಕೋಟಿ ಆಗಲಿದೆ. ಎಂ.ಜಿ.ರಸ್ತೆ ಆಸುಪಾಸಿನಲ್ಲಿ 40 ಎಕರೆಯಷ್ಟು ಜಾಗಕ್ಕೆ ₹ 2,808.13 ಕೋಟಿ ಮೌಲ್ಯವಿದೆ. ಕೊಡಿಯಾಲಕರೇನಹಳ್ಳಿ ಗ್ರಾಮದ ಜಾಗಕ್ಕೆ ನೀಡಿದ ಟಿಡಿಆರ್‌ ಅನ್ನು ಎಂ.ಜಿ.ರಸ್ತೆಯಲ್ಲಿ ಬಳಸಿದರೆ ಅದರ ಮೌಲ್ಯ ₹ 5,616.26 ಕೋಟಿ ಆಗಲಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಸಾರಾಂಶ

ಬಿಬಿಎಂಪಿಯು ಕಸ ವಿಲೇವಾರಿಗಾಗಿ ರಾಮನಗರ ಜಿಲ್ಲೆಯ ಕೊಡಿಯಾಲಕರೇನಹಳ್ಳಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸುವ ನೆಪದಲ್ಲಿ ಸರ್ಕಾರವು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಕೆಟಿಸಿಪಿ) ಕಾಯ್ದೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.