ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ತತ್ತರಿಸಿದ್ದ ಜನತೆಗೆ ಈ ಬಾರಿಯ ದಸರಾ ನವ ಉಲ್ಲಾಸ ಮೂಡಿಸಿತು.
ಧಾರ್ಮಿಕ ಮತ್ತು ಸಂಸ್ಕೃತಿಯ ಆಚರಣೆಯ ಸಮ್ಮಿಲನವಾದ ಈ ನಾಡಹಬ್ಬವನ್ನು ಸಂಭ್ರಮದಿಂದ ಸರಳವಾಗಿ ಆಚರಿಸಿದರು. ಆಯುಧ ಪೂಜೆ ಮತ್ತು ವಿಜಯ ದಶಮಿಯನ್ನು ಜನತೆ ಸಂತಸದಿಂದ ಆಚರಿಸಿ ಸಂಭ್ರಮಿಸಿದರು. ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಬೆಂಗಾಲಿ ಸಮುದಾಯದ ಜನರು ನವರಾತ್ರಿ ಆಚರಣೆ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾ ವಿಗ್ರಹಗಳನ್ನು ಹಲಸೂರು ಕೆರೆಯಲ್ಲಿ ಶುಕ್ರವಾರ ವಿಸರ್ಜಿಸಿದರು. ಮೆರವಣಿಗೆಯಲ್ಲಿ ಸಾಗಿದ ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇಸ್ಕಾನ್‌ನಲ್ಲಿಯೂ ಶ್ರದ್ಧಾಭಕ್ತಿಯಿಂದ ವಿಜಯದಶಮಿ ಆಚರಿಸಲಾಯಿತು. ಶ್ರೀ ಕೃಷ್ಣ ಬಲರಾಮ ದೇವರಿಗೆ ರಾಮ-ಲಕ್ಷ್ಮಣರ ಅಲಂಕಾರ ಮಾಡಲಾಗಿತ್ತು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ ದಾಸರು ವಿಜಯದಶಮಿ ಹಬ್ಬದ ಕುರಿತು ಪ್ರವಚನ ಮಾಡಿದರು. ಸಂಜೆ ಶ್ರೀರಾಮ ತಾರಕ ಯಜ್ಞ ಹಾಗೂ ಶ್ರೀ ರಾಮ ಕೀರ್ತನೆಗಳನ್ನು ಆಯೋಜಿಸಲಾಗಿತ್ತು.
ಮಲ್ಲೇಶ್ವರದ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ‘ಸಾಗರ ಕನ್ಯೆ ಶ್ರೀವಾಸವಿ’ ಸೆಟ್ ಭಕ್ತಾದಿಗಳ ಗಮನ ಸೆಳೆಯುತ್ತಿದೆ. ರಾತ್ರಿವರೆಗೂ ಭಕ್ತಾದಿಗಳು ಉದ್ದನೇಯ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಆರ್.ಟಿ. ನಗರದಲ್ಲಿ ಸಿದ್ಧಾರ್ಥ ಸಾಂಸ್ಕೃತಿಕ ಪರಿಷತ್ ವತಿಯಿಂದ ದೇವಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹಬ್ಬದ ಸಂಭ್ರಮದಿಂದ ಮಾರುಕಟ್ಟೆ ಪ್ರದೇಶಗಳು ಸಹ ಕಳೆಗಟ್ಟಿದ್ದವು. ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಮುಂತಾದ ಪ್ರದೇಶಗಳಲ್ಲಿ ಜನಜಂಗುಳಿ ಕಂಡು ಬಂತು.
ಅಂಬೇಡ್ಕರ್ ಗುಟ್ಟ: ದಸರಾ ಜಾತ್ರೆ
ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಕಾಡುಗೋಡಿ ವಾರ್ಡ್‌ನ ಅಂಬೇಡ್ಕರ್ ಗುಟ್ಟದಲ್ಲಿ ದಸರಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಜಾತ್ರೆ ನೆರವೇರಿತು.
ಗ್ರಾಮದ ಹೆಬ್ಬಾಗಿಲ ಮೂಲಕ ತಮಟೆ ವಾದ್ಯ ಮತ್ತು ಕಳಶಗಳೊಂದಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಯಲ್ಲಮ್ಮ, ಸಪ್ಪಲಮ್ಮ, ಮಾರಮ್ಮ, ಮುನೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಮಹಾಗಣಪತಿ ದೇವರುಗಳ ಪಲ್ಲಕ್ಕಿಗಳು
ಮೆರವಣಿಗೆಯೊಂದಿಗೆ ದಸರಾ ಮೈದಾನಕ್ಕೆ ಬಂದವು.
ಪಟ್ಟಂದೂರು ಅಗ್ರಹಾರ, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ವೈಟ್‌ಫೀಲ್ಡ್, ಹಗದೂರು, ಗಾಂಧಿಪುರ, ಇಮ್ಮಡಿಹಳ್ಳಿ, ನಾಗೊಂಡಹಳ್ಳಿ, ಚನ್ನಸಂದ್ರ, ಕಾಡುಗೋಡಿ, ಬೆಳ್ತೂರು, ದಿನ್ನೂರು ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದರು.
ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ‘ಕೋವಿಡ್‌ನಿಂದ ಉತ್ಸವಗಳು ಕಡಿಮೆಯಾಗಿದ್ದವು. ಹಬ್ಬಗಳು ಈ ನೆಲದ ಸಾಂಸ್ಕೃತಿಕ ಚೌಕಟ್ಟು ಹೊಂದಿರುತ್ತವೆ. ಜಾತ್ರೆಗೆ 60ಕ್ಕೂ ಹೆಚ್ಚು ಗ್ರಾಮಗಳಿಂದ ಬಂದಿರುವ ದೇವರುಗಳನ್ನು ಭಕ್ತರು ಕಣ್ತುಂಬಿಕೊಳ್ಳಬೇಕು’ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ತತ್ತರಿಸಿದ್ದ ಜನತೆಗೆ ಈ ಬಾರಿಯ ದಸರಾ ನವ ಉಲ್ಲಾಸ ಮೂಡಿಸಿತು. ಧಾರ್ಮಿಕ ಮತ್ತು ಸಂಸ್ಕೃತಿಯ ಆಚರಣೆಯ ಸಮ್ಮಿಲನವಾದ ಈ ನಾಡಹಬ್ಬವನ್ನು ಸಂಭ್ರಮದಿಂದ ಸರಳವಾಗಿ ಆಚರಿಸಿದರು. ಆಯುಧ ಪೂಜೆ ಮತ್ತು ವಿಜಯ ದಶಮಿಯನ್ನು ಜನತೆ ಸಂತಸದಿಂದ ಆಚರಿಸಿ ಸಂಭ್ರಮಿಸಿದರು. ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.