ADVERTISEMENT

ರಾಜಧಾನಿಯಲ್ಲಿ ಮಳೆ ಅಬ್ಬರ: ಮೂರೇ ಗಂಟೆಯಲ್ಲಿ 9 ಸೆಂ.ಮೀ ಮಳೆ

ಕೆಲವೆಡೆ ಮನೆಗಳಿಗೆ ನುಗ್ಗಿದ ನೀರು l ಹೊಳೆಯಂತಾದ ರಸ್ತೆ, ಮೈದಾನಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 20:30 IST
Last Updated 15 ಅಕ್ಟೋಬರ್ 2021, 20:30 IST
ನಾಗರಬಾವಿ ಬಳಿಯ ಹೊರವರ್ತುಲ ರಸ್ತೆಯಲ್ಲಿ ನೀರು ಹರಿದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬ್ಯಾಟರಾಯನಪುರ ಸಂಚಾರ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ನಾಗಯ್ಯ ಮತ್ತು ಹೆಡ್‌ ಕಾನ್‌ಸ್ಟೆಬಲ್ ಮಹೇಶ್‌ ಅವರು ನೀರು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು – ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ನಾಗರಬಾವಿ ಬಳಿಯ ಹೊರವರ್ತುಲ ರಸ್ತೆಯಲ್ಲಿ ನೀರು ಹರಿದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬ್ಯಾಟರಾಯನಪುರ ಸಂಚಾರ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ನಾಗಯ್ಯ ಮತ್ತು ಹೆಡ್‌ ಕಾನ್‌ಸ್ಟೆಬಲ್ ಮಹೇಶ್‌ ಅವರು ನೀರು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು – ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್   
""

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ತಡರಾತ್ರಿ ಮೂರೇ ಗಂಟೆಯಲ್ಲಿ ಗರಿಷ್ಠ 9.10 ಸೆಂ.ಮೀ ಮಳೆ ದಾಖಲಾಗಿದೆ.

ತಡರಾತ್ರಿ ಸುರಿದ ಮಳೆಯಿಂದಾಗಿ ನಗರದ ಕಾಲುವೆಗಳು, ಪ್ರಮುಖ ರಸ್ತೆಗಳು ಹಾಗೂ ಕೆಲ ಮೈದಾನಗಳು ಹೊಳೆಯಂತಾಗಿದ್ದವು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು.

ದಸರಾ ಹಬ್ಬದ ಸಂಭ್ರಮ ಆಚರಿಸಿದ್ದ ಜನ, ರಾತ್ರಿ ನಿದ್ದೆಗೆ ಜಾರಿದ್ದರು. ತಡರಾತ್ರಿ 2 ಗಂಟೆ ಸುಮಾರಿಗೆ ಧಾರಾಕಾರವಾಗಿ ಸುರಿಯಲಾರಂಭಿಸಿದ್ದ ಮಳೆಯ ಸದ್ದು, ನಿದ್ದೆಯಲ್ಲಿದ್ದವರನ್ನು ಬಡಿದೆಬ್ಬಿಸಿತು. ನಂತರ, ಮೂರು ಗಂಟೆ ನಿರಂತರವಾಗಿ ಮಳೆ ಸುರಿಯಿತು.

ADVERTISEMENT

ದಾಸರಹಳ್ಳಿ ಕ್ಷೇತ್ರದ ಚೊಕ್ಕಸಂದ್ರ, ಬಿಟಿಎಸ್ ಬಡಾವಣೆ, ರಾಯಲ್ ಬಡಾವಣೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಮೇಲೆಯೇ ನೀರು ಧಾರಾಕಾರವಾಗಿ ಹರಿಯಿತು. ಅಲ್ಲೆಲ್ಲ ಮನೆಗಳಿಗೆ ನೀರು ನುಗ್ಗಿತ್ತು. ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲೇ ಮುಳುಗಿದ್ದವು. ಪೀಠೋಪಕರಣಗಳು ನೀರಿನಲ್ಲಿ ತೇಲುತ್ತಿದ್ದವು. ಕೆಲ ಪೀಠೋಪಕರಣಗಳು, ನೀರಿನೊಂದಿಗೆ ತೇಲಿಕೊಂಡು ಹೋದವು.

ಕಾಲುವೆ ತ್ಯಾಜ್ಯವೆಲ್ಲ ನೀರಿನ ಜೊತೆಯಲ್ಲಿ ಹರಿದು ಮನೆಯೊಳಗೆ ಸೇರಿತ್ತು. ಇದರಿಂದಾಗಿ ಮನೆಯಲ್ಲಿ ದುರ್ವಾಸನೆ ಬರುತ್ತಿತ್ತು. ಮೂಗು ಮುಚ್ಚಿಕೊಂಡೇ ನಿವಾಸಿಗಳು, ಶುಕ್ರವಾರ ಇಡೀ ದಿನ ಮನೆಯೊಳಗಿನ ನೀರು ತೆರವು ಮಾಡಿದರು.

‘ರಾಜಕಾಲುವೆ ಕಾಮಗಾರಿ ನಡೆಯುತ್ತಿತ್ತು, ಅಲ್ಲೆಲ್ಲ ನೀರು ಹರಿಯುವಿಕೆಗೆ ತಡೆಯೊಡ್ಡಲಾಗಿದೆ. ಇದೇ ಕಾರಣಕ್ಕೆ ನೀರು ವಸತಿ ಪ್ರದೇಶದತ್ತ ಹರಿದು ಮನೆಗಳಿಗೆ ನುಗ್ಗುತ್ತಿದೆ. ಜೋರು ಮಳೆ ಬಂದರೆ, ಮನೆಯೊಳಗೆ ನೀರು ನುಗ್ಗುವ ಭಯ ಕಾಡುತ್ತಿದೆ. ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಹಬ್ಬದ ದಿನವೇ ಮನೆಯಲ್ಲೆಲ್ಲ ನೀರು ನಿಂತಿದ್ದು ನೋಡಿ ಕಣ್ಣೀರಿಟ್ಟೆವು’ ಎಂದು ಬಿಟಿಎಸ್ ಬಡಾವಣೆ ನಿವಾಸಿಗಳು ಹೇಳಿದರು.

ದೊಮ್ಮಲೂರು ವಾರ್ಡ್‌ನ ಅಮರ್ ಜ್ಯೋತಿ ಬಡಾವಣೆಯ 4ನೇ ಮುಖ್ಯರಸ್ತೆಯಲ್ಲೂ ನಾಲ್ಕು ಅಡಿಯಷ್ಟು ನೀರು ಹರಿಯಿತು. ಅಕ್ಕ–ಪಕ್ಕದ ಮನೆಗಳ ಅಂಗಳಕ್ಕೂ ನೀರು ನುಗ್ಗಿತ್ತು. ಅಗತ್ಯ ವಸ್ತುಗಳ ಖರೀದಿ ಹಾಗೂ ಇತರೆ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವವರು, ಹರಿಯುವ ನೀರಿನಲ್ಲೇ ಸಂಚರಿಸಬೇಕಾಯಿತು.

ಮಹದೇವಪುರ ವಾರ್ಡ್‌ನ ಬೆನ್ನಿಗಾನಹಳ್ಳಿ ಪೈ ಬಡಾವಣೆಯಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಇದರಿಂದ ರಾಜಕಾಲುವೆ ಮುಚ್ಚಿ ಹೋಗಿದ್ದು, ಕಾಲುವೆಯಲ್ಲಿ ಹರಿದು ಹೋಗಬೇಕಿದ್ದ ನೀರು ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗಿತ್ತು. ಸ್ಥಳೀಯರು ತೊಂದರೆ ಅನುಭವಿಸಿದರು. 

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು  – ಪ್ರಜಾವಾಣಿ ಚಿತ್ರ

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು  – ಪ್ರಜಾವಾಣಿ ಚಿತ್ರ

ಜಕ್ಕೂರು, ರಾಜಾಜಿನಗರ ಸುತ್ತಮುತ್ತ ಭಾರಿ ಮಳೆ: ನಗರದ ಜಕ್ಕೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ 9.10 ಸೆಂ. ಮೀ ಮಳೆಯಾಗಿದೆ. ಇದು, ನಗರದ ಗರಿಷ್ಠ ಮಳೆ ಪ್ರಮಾಣವಾಗಿದೆ.

ರಾಜಾಜಿನಗರ, ಬಸವೇಶ್ವರನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಗುರುವಾರ ತಡರಾತ್ರಿ 8.55 ಸೆಂ.ಮೀ ಮಳೆ ಆಗಿದೆ. ಈ ಪ್ರದೇಶಗಳಲ್ಲಿ ಕೆಲ ರಸ್ತೆಗಳು ಹಾಗೂ ಮೈದಾನಗಳಲ್ಲಿ ನೀರು ನಿಂತಿದ್ದು ಶುಕ್ರವಾರ ಬೆಳಿಗ್ಗೆ ಕಂಡುಬಂತು.

ಬೆಳಿಗ್ಗೆ ಎದ್ದು ನಿತ್ಯದ ಕೆಲಸಕ್ಕಾಗಿ ಮನೆಯಿಂದ ವಾಹನ ಸಮೇತ ಹೊರಗೆ ಬಂದಿದ್ದ ಜನ, ರಸ್ತೆಯಲ್ಲಿ ಹರಿಯುವ ನೀರಿನಲ್ಲೇ ಸಂಚರಿಸಿದರು. ಹಲವೆಡೆ, ಮರದ ಕೊಂಬೆಗಳು ಬಿದ್ದಿದ್ದವು. ಸ್ಥಳೀಯರೇ ಅವುಗಳನ್ನು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಮೆಜೆಸ್ಟಿಕ್, ಗಾಂಧಿನಗರ, ಕಾಟನ್‌ಪೇಟೆ, ಚಿಕ್ಕಪೇಟೆ, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ಗಿರಿನಗರ, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ದೀಪಾಂಜಲಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಹೆಬ್ಬಾಳ, ವಸಂತನಗರ, ಶಿವಾಜಿನಗರ, ಆರ್‌.ಟಿ.ನಗರ, ಸಂಜಯನಗರ, ಜೆ.ಸಿ.ನಗರ, ಶೇಷಾದ್ರಿಪುರ, ವಿಲ್ಸನ್ ಗಾರ್ಡನ್, ಶಾಂತಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಬೆಳ್ಳಂದೂರು, ವಿದ್ಯಾರಣ್ಯಪುರ, ಯಲಹಂಕ, ಮಹದೇವಪುರ, ಕೆ.ಆರ್‌.ಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಸಾಧಾರಣ ಮಳೆ ಆಯಿತು. 

ಶುಕ್ರವಾರವೂ ಮಳೆ ಅಬ್ಬರ

ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಸ್ವಲ್ಪ ಬಿಸಿಲು ಕಾಣಿಸಿಕೊಂಡರೂ ಮೋಡ ಕವಿದ ವಾತಾವರಣವೇ ಹೆಚ್ಚಿತ್ತು. ರಾತ್ರಿಯಾಗುತ್ತಿದ್ದಂತೆ ಶುರುವಾರ ಮಳೆ, ಧಾರಾಕಾರವಾಗಿ ಸುರಿಯಿತು.

ನಗರದ ಬಹುತೇಕ ಕಡೆ ಶುಕ್ರವಾರ ರಾತ್ರಿ ಮಳೆ ಆಯಿತು. ಹಬ್ಬದ ಸಂಭ್ರಮದಲ್ಲಿದ್ದವರು, ಮಾರುಕಟ್ಟೆ ಹಾಗೂ ದೇವಸ್ಥಾನಗಳಿಗೆ ಬಂದಿದ್ದರು. ಅವರೆಲ್ಲ ಮಳೆಯಲ್ಲಿ ಸಿಲುಕಿದ್ದರು. ಮಳೆ ಸುರಿವ ವೇಳೆಯಲ್ಲಿ ಬಹುತೇಕರು, ರಸ್ತೆ ಅಕ್ಕ–ಪಕ್ಕದ ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದರು. ಸುರಿದ ಮಳೆಯಲ್ಲೇ ಕೆಲವರು ಕೊಡೆ ಸಹಾಯದಿಂದ ಸಂಚರಿಸಿದರು.

ಸಾರಾಂಶ

ನಗರದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ತಡರಾತ್ರಿ ಮೂರೇ ಗಂಟೆಯಲ್ಲಿ ಗರಿಷ್ಠ 9.10 ಸೆಂ.ಮೀ ಮಳೆ ದಾಖಲಾಗಿದೆ. ತಡರಾತ್ರಿ ಸುರಿದ ಮಳೆಯಿಂದಾಗಿ ನಗರದ ಕಾಲುವೆಗಳು, ಪ್ರಮುಖ ರಸ್ತೆಗಳು ಹಾಗೂ ಕೆಲ ಮೈದಾನಗಳು ಹೊಳೆಯಂತಾಗಿದ್ದವು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.