ಯಲಹಂಕ: ಕಳೆದ ನಾಲ್ಕೈದು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ 33 ಸಾವಿರ ಹುದ್ದೆಗಳ ಪೈಕಿ 17 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ವರ್ಷ ಇನ್ನೂ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ 7ನೇ ತಂಡದ ನಾಗರಿಕ, 33ನೇ ತಂಡದ ಸಶಸ್ತ್ರ ಹಾಗೂ 3ನೇ ತಂಡದ ಕೆಎಸ್ಐಎಸ್ಎಫ್ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಒಟ್ಟು 309 ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಹಾಗೂ ನವೀಕರಣಗೊಂಡ ನೂತನ ಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪೊಲೀಸರಿಗಾಗಿ ಈಗಾಗಲೆ 11 ಸಾವಿರ ವಸತಿಗೃಹಗಳನ್ನು ನಿರ್ಮಿಸಲಾಗಿದ್ದು, ಈಗ ಮತ್ತೆ 10 ಸಾವಿರ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಈ ವರ್ಷ ಹೊಸದಾಗಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲು ₹200 ಕೋಟಿ ಅನುದಾನ ಖರ್ಚು ಮಾಡಲಾಗುತ್ತಿದೆ ಎಂದರು.
ಪೊಲೀಸರ ಮೇಲೆ ಅಲ್ಲಲ್ಲಿ ಕೇಳಿಬರುತ್ತಿರುವ ಕೆಲವು ಆಪಾದನೆಗಳು ಮನಸ್ಸಿಗೆ ಅತ್ಯಂತ ನೋವುತಂದಿದೆ. ಸಾರ್ವಜನಿಕರನ್ನು ಹಣಕ್ಕಾಗಿ ಪೀಡಿಸಿ, ಹಿಂಸಿಸುವ ಮತ್ತು ರಿಯಲ್ ಎಸ್ಟೇಟ್ ದಂಧೆಯವರ ಜೊತೆ ಸೇರುವುದು ಮರ್ಯಾದೆ ತರುವಂತಹದ್ದಲ್ಲ. ಇಲಾಖೆಯ ಗೌರವ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ಪಿ.ಹರಿಶೇಖರನ್, ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಕೆ. ಆರ್.ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ನಾಲ್ಕೈದು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ 33 ಸಾವಿರ ಹುದ್ದೆಗಳ ಪೈಕಿ 17 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ವರ್ಷ ಇನ್ನೂ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.