ADVERTISEMENT

ಬೆಳಗಾವಿ: ಅಧಿಕೃತ ಚಾರಣಕ್ಕೆ ಇಲಾಖೆಯಿಂದಲೇ ‘ಪಥ’

ಮಾರ್ಗದರ್ಶಕರಾಗಿ ಆ ಭಾಗದ ಸ್ಥಳೀಯರಿಗೆ ಕೆಲಸ

ಎಂ.ಮಹೇಶ
Published 20 ಜನವರಿ 2022, 19:30 IST
Last Updated 20 ಜನವರಿ 2022, 19:30 IST
ಕರ್ನಾಟಕ-ಗೋವಾ ಗಡಿಯ ಸೂರಲ್ ಗ್ರಾಮದ ಬೆಟ್ಟದಿಂದ ಕಾಣುವ ವಜ್ರಾ ಫಾಲ್ಸ್ (ಸಂಗ್ರಹ ಚಿತ್ರ)
ಕರ್ನಾಟಕ-ಗೋವಾ ಗಡಿಯ ಸೂರಲ್ ಗ್ರಾಮದ ಬೆಟ್ಟದಿಂದ ಕಾಣುವ ವಜ್ರಾ ಫಾಲ್ಸ್ (ಸಂಗ್ರಹ ಚಿತ್ರ)   

ಬೆಳಗಾವಿ: ಅರಣ್ಯದಲ್ಲಿ ಚಾರಣ ಮಾಡುತ್ತಾ ಅಲ್ಲಿನ ಸೊಬಗನ್ನು ಸವಿಯಲು ಬಯಸುವ ವನ್ಯಪ್ರೇಮಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಬೆಳಗಾವಿ ವೃತ್ತದಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ‘ಚಾರಣ ಪಥ’ಗಳನ್ನು ಗುರುತಿಸಿದೆ.

ಧಾಮಣೆ, ತಿಲಾರಿ, ಕಡಾ, ಚಿಕಳೆ, ಸಡಾ, ಬುಡಾಬುಡಾ ಸ್ಟ್ರಿಂಗ್, ವಜ್ರಫಾಲ್ಸ್ ಹಾಗೂ ಹಂಡಿಬಡಗನಾಥ ಚಾರಣ ಪಥಗಳನ್ನು ಗುರುತಿಸಲಾಗಿದೆ. ರಾಮದುರ್ಗದಲ್ಲಿ ಹೂವಿನಕೊಳ್ಳ, ಈಶ್ವರಕೊಳ್ಳ, ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಸಿಡಿಲ ಪಡಿಯ ಚಾರಣ ಪಥಗಳನ್ನು ಸಜ್ಜುಗೊಳಿಸಿದೆ. ಇಲಾಖೆಯಿಂದ ಗುರುತಿಸಿರುವ ಈ ಚಾರಣ ಪಥಗಳಲ್ಲಿ ಚಾರಣ ಮಾಡುವವರಿಗೆ ಇಲಾಖೆಯಿಂದಲೇ ಒಬ್ಬೊಬ್ಬರು ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ.

ಅನಧಿಕೃತ ಚಟುವಟಿಕೆಗೆ ಕಡಿವಾಣ: ಈ ಸ್ಥಳಗಳಲ್ಲಿ ಪರಿಸರ ಪ್ರೇಮಿಗಳು, ಯುವಕರು ಚಾರಣ ಮಾಡುತ್ತಿದ್ದರು. ಅನಧಿಕೃತವಾಗಿ ಈ ಚಟುವಟಿಕೆ ನಡೆಯುತ್ತಿತ್ತು. ಹೀಗೆ ಬರುವವರು ಪ್ಲಾಸ್ಟಿಕ್‌ ಮೊದಲಾದ ಪದಾರ್ಥಗಳನ್ನು ಬಿಸಾಡಿ ಹೋಗುತ್ತಿದ್ದರು. ವಾತಾವರಣ ಹಾಳು ಮಾಡುವುದು ಕೂಡ ಕಂಡುಬರುತ್ತಿತ್ತು. ಹೀಗೆ ಅನಧಿಕೃತ ಚಟುವಟಿಕೆಗಳು ನಡೆಯುವುದರಿಂದ ಅನಾಹುತಗಳ ಆತಂಕವೂ ಇರುತ್ತಿತ್ತು. ಸಂಘರ್ಷಕ್ಕೂ ದಾರಿ  ಮಾಡಿಕೊಡುತ್ತಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಎನ್‌ಜಿಗಳು ಹಾಗೂ ಪರಿಸರ ಪ್ರೇಮಿಗಳು ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಪರಿಣಾಮ, ಇಲಾಖೆಯಿಂದಲೇ ಚಾರಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಚಾರಣಕ್ಕೆ ಬರುವವರು, https://karnatakaecotourism.com ಜಾಲತಾಣದ ಮೂಲಕ ಬುಕ್ಕಿಂಗ್ ಮಾಡಬೇಕು. ವಯಸ್ಕರಿಗೆ ₹ 250 ಹಾಗೂ ಮಕ್ಕಳಿಗೆ ₹ 125 ನಿಗದಿಪಡಿಸಲಾಗಿದೆ. ಆಯಾ ಚಾರಣ ಪಥದ ಆರಂಭದ ಸ್ಥಳದಲ್ಲೇ ಹಣ ಪಾವತಿಸಿ ರಸೀದಿ ಪಡೆದು, ಚಾರಣ ಕೈಗೊಳ್ಳಲೂ ಅವಕಾಶವಿದೆ. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಈ ಪ್ರವಾಸೋದ್ಯಮ ಚಟುವಟಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅರಣ್ಯದೊಳಗಿನ ನಡಿಗೆಗೆ ಅಧಿಕೃತವಾಗಿಯೇ ಬಾಗಿಲು ತೆರೆಯಲಾಗಿದೆ.

ಬಯಸುವ ಪಥಕ್ಕೆ: ನಿಗದಿತ ಚಾರಣ ಪಥಕ್ಕೆ ಬುಕ್ಕಿಂಗ್ ಮಾಡಿದವರನ್ನು ಮಾರ್ಗದರ್ಶಕರ ಜೊತೆ ಕಳುಹಿಸಿಕೊಡಲಾಗುತ್ತದೆ.

‘ವಿಭಾಗದಲ್ಲಿ ಇದೇ ಮೊದಲ ಬಾರಿಗೆ ‘ಚಾರಣ ಪಥ’ಗಳನ್ನು ಗುರುತಿಸಿ ನಡಿಗೆಗೆ ವ್ಯವಸ್ಥೆ ಮಾಡಲಾಗಿದೆ. ಚಾರಣಕ್ಕೆ ಬರುವವರಿಗೆ ಮಾರ್ಗದರ್ಶನ ಮಾಡಲು ಸ್ಥಳೀಯ ಹಾಗೂ ಕಾಡಂಚಿನ ಯುವಕ–ಯುವತಿಯರಿಗೆ ತರಬೇತಿಯನ್ನೂ ನೀಡಲಾಗಿದೆ. ಒಟ್ಟು 45 ಮಂದಿಯನ್ನು ಪ್ರಕೃತಿ ಮಾರ್ಗದರ್ಶಕರನ್ನಾಗಿ ಸಜ್ಜುಗೊಳಿಸಲಾಗಿದೆ’ ಎಂದು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮಾರ್ಗದರ್ಶಕರು, ಪ್ರವಾಸಿಗರು ದಾರಿ ತಪ್ಪದಂತೆ ನಿಗದಿತ ಮಾರ್ಗದಲ್ಲೆ ಕರೆದೊಯ್ಯುತ್ತಾರೆ. ಅಲ್ಲಿನ ಮರ–ಗಿಡಗಳ ಮಾಹಿತಿ, ವಿಶೇಷತೆಗಳು, ಪ್ರಾಣಿ–ಪಕ್ಷಿಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅವುಗಳ ಸಂರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಾರೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುವುದರಿಂದ, ಆಸಕ್ತರಿಗೆ ಚಾರಣ ಮಾಡಿದ ಖುಷಿಯೂ ಸಿಗುತ್ತದೆ. ಸ್ಥಳೀಯರಿಗೆ ಕೆಲಸ ಕೊಟ್ಟಂತೆಯೂ ಆಗುತ್ತದೆ. ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತೆಯೂ ಆಗುತ್ತದೆ. ಇಲಾಖೆಗೆ ವರಮಾನವೂ ಬರುತ್ತದೆ. ಅದರಲ್ಲಿ ಅಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎನ್ನುತ್ತಾರೆ ಅವರು.

ಈಚೆಗೆ ಆರಂಭಿಸಿದ ಚಾರಣ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ₹ 10ಸಾವಿರ ವರಮಾನ ಬಂದಿದೆ ಎಂದು ಮೂಲಗಳು ತಿಳಿಸಿವೆ.

‘ಸಮಯ ನಿಗದಿ’
‘ಚಾರಣಿಗರು ನಿಗದಿತ ಮಾರ್ಗದಲ್ಲೇ ಸಾಗುವುದಕ್ಕಾಗಿ ಜಿಪಿಎಸ್ ಬಳಸಲಾಗುವುದು. ಹೆಮ್ಮಡಗಾದಿಂದ ಆರಂಭವಾಗುವ ಚಾರಣ ಪಥ ಅತಿ ಉದ್ದದ ಅಂದರೆ ಒಟ್ಟಾರೆ 24 ಕಿ.ಮೀ. ಆಗಿದೆ. ಉಳಿದವ ಸರಾಸರಿ 8ರಿಂದ 10 ಕಿ.ಮೀ. ಹೊಂದಿವೆ. ಸರಾಸರಿ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 11.30ರವರೆಗೆ ಮಾತ್ರವೇ ಅವಕಾಶ ಇರುತ್ತದೆ. ಪ್ರತಿ ಪಥಕ್ಕೂ ದಿನಕ್ಕೆ ತಲಾ 100 ಮಂದಿಗೆ ಮಾತ್ರವೇ ಮಾರ್ಗಸೂಚಿ ಪ್ರಕಾರ ಅವಕಾಶ ಕೊಡಲಾಗುತ್ತದೆ. ಆ ಸಂಖ್ಯೆ ಮೀರುತ್ತಿದ್ದಂತೆಯೇ ದಿನದ ಬುಕ್ಕಿಂಗ್‌ ಅಂತ್ಯಗೊಳ್ಳುತ್ತದೆ’ ಎಂದು ಸಾಲಿಮಠ ಮಾಹಿತಿ ನೀಡಿದರು.

‘ಚಾರಣಿಗರ ಸಂಗ್ರಹಿಸುವ ಶುಲ್ಕದಲ್ಲಿ ಅರ್ಧವನ್ನು ಮಾರ್ಗದರ್ಶಕರಿಗೆ ಕೊಡಲಾಗುತ್ತದೆ. ಉಳಿದ ಹಣವನ್ನು ಅಲ್ಲಿ ಮೂಲಸೌಲಭ್ಯ ವೃದ್ಧಿಗೆ ಬಳಸಲಾಗುತ್ತದೆ. ಯೋಜನೆ ಕುರಿತು ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ’ ಎಂದು ತಿಳಿಸಿದರು.

ಶುಲ್ಕ ಇಳಿಕೆಗೆ ಪ್ರಸ್ತಾವ
ವಯಸ್ಕರಿಗೆ ಏಕರೂಪವಾಗಿ ₹ 250 ಪ್ರವೇಶ ಶುಲ್ಕ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇದು ದುಬಾರಿಯಾಗುತ್ತದೆ. ಹೀಗಾಗಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಿಗದಿಪಡಿಸಲು ಆಯಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅನುಮತಿ ಕೊಡಬೇಕು ಎಂದು ಕೋರಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕಲ್ಲಿ ಶುಲ್ಕ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಲಸ ಸಿಕ್ಕಂತಾಗಿದೆ
ಈ ಯೋಜನೆಯಿಂದ ಕಾಡಂಚಿನ ಒಂದಷ್ಟು ಮಂದಿಗೆ ಕೆಲಸ ಸಿಕ್ಕಂತಾಗಿದೆ. ಚಾರಣ ಪಥಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಅವರಿಗೆ ಜಾಕೆ್ಟ್, ಶೂ, ಕ್ಯಾಪ್‌, ಬ್ಯಾಗ್‌ ಮೊದಲಾದವುಗಳನ್ನು ಕೊಡಲಾಗುತ್ತದೆ.
–ವಿಜಯಕುಮಾರ ಸಾಲಿಮಠ, ಸಿಸಿಎಫ್‌, ಬೆಳಗಾವಿ ವೃತ್ತ, ಅರಣ್ಯ ಇಲಾಖೆ

ಸಾರಾಂಶ

ಅರಣ್ಯದಲ್ಲಿ ಚಾರಣ ಮಾಡುತ್ತಾ ಅಲ್ಲಿನ ಸೊಬಗನ್ನು ಸವಿಯಲು ಬಯಸುವ ವನ್ಯಪ್ರೇಮಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಬೆಳಗಾವಿ ವೃತ್ತದಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ‘ಚಾರಣ ಪಥ’ಗಳನ್ನು ಗುರುತಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.