ADVERTISEMENT

ಕೆರೆಗಳಿಗೆ ಹಸಿರು ಪೀಠ ಸಮಿತಿ ಭೇಟಿ

ಆನೇಕಲ್‌ ತಾಲ್ಲೂಕಿನ ಕೆರೆಗಳ ಒತ್ತುವರಿ, ಮಾಲಿನ್ಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 5:47 IST
Last Updated 19 ಜನವರಿ 2022, 5:47 IST
ಆನೇಕಲ್ ತಾಲ್ಲೂಕಿನ ಹೆನ್ನಾಗರ ಕೆರೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನೇಮಕಗೊಂಡ ಜಂಟಿ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು
ಆನೇಕಲ್ ತಾಲ್ಲೂಕಿನ ಹೆನ್ನಾಗರ ಕೆರೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನೇಮಕಗೊಂಡ ಜಂಟಿ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು   

ಆನೇಕಲ್: ತಾಲ್ಲೂಕಿನ ವಿವಿಧ ಕೆರೆಗಳಲ್ಲಿ ಮಾಲಿನ್ಯ ಮತ್ತು ಕೆರೆ ಒತ್ತುವರಿ ಬಗ್ಗೆ ಪರಿಶೀಲನೆ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದಂತೆ ನೇಮಕಗೊಂಡಿರುವ ಜಂಟಿ ಸಮಿತಿ ತಾಲ್ಲೂಕಿನ ಕೆರೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲ್ಲೂಕಿನ ಜಿಗಣಿ ಕೆರೆ, ರಾಜಕಾಲುವೆ ಒತ್ತುವರಿ, ಹೆನ್ನಾಗರ ಕೆರೆ, ಮಾಸ್ತೇನಹಳ್ಳಿ, ಯಾರಂಡಹಳ್ಳಿ, ಕಾಚನಾಯಕನಹಳ್ಳಿ ಕೆರೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಿಂದ ನೇಮಕ ಮಾಡಿರುವ ವಿವಿಧ ಇಲಾಖೆ ಮತ್ತು ತಜ್ಞರ ಜಂಟಿ ಸಮಿತಿ ಭೇಟಿ ನೀಡಿ ಕೆರೆ ನೀರಿನ ಸ್ಯಾಂಪಲ್‌ ಸಂಗ್ರಹ ಮಾಡಿತು. ಕೆರೆಗಳಿಗೆ ವಿವಿಧ ಕಾರ್ಖಾನೆಗಳ ತ್ಯಾಜ್ಯ ಹರಿಯುತ್ತಿರುವುದನ್ನು ಪರಿಶೀಲಿಸಿತು. ಹೆನ್ನಾಗರ ಕೆರೆ ಸಮೀಪ ಸಾರ್ವಜನಿಕರು ನೀಡಿದ ಅಹವಾಲು ಸ್ವೀಕರಿಸಿತು.

ಹಸಿರು ನ್ಯಾಯಾಧೀಕರಣದ ಆದೇಶದಂತೆ ಐಐಎಸ್‌ಸಿ ಸಹಾಯಕ ಪ್ರಾಧ್ಯಾಪಕ ಡಾ.ಲಕ್ಷ್ಮೀನಾರಾಯಣರಾವ್‌, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ವಿ.ಅಂಜನಕುಮಾರಿ, ಕರ್ನಾಟಕ ಸಿಯಾದ ರವಿಕುಮಾರ್‌, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಸೀಫ್‌ ಖಾನ್‌, ವಾಸುದೇವ್‌, ಮಂಜುನಾಥ್‌, ಉಪತಹಶೀಲ್ದಾರ್‌ ಚಂದ್ರಶೇಖರ್‌ ಅವರ ತಂಡ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ADVERTISEMENT

ಹೆನ್ನಾಗರ ಕೆರೆಯು ಜಿಲ್ಲೆಯಲ್ಲಿಯೇ ದೊಡ್ಡ ಕೆರೆಯಾಗಿದೆ. ವರ್ಷವಿಡೀ ನೀರು ತುಂಬಿರುತ್ತದೆ. ಆದರೆ, ನೀರು ಮಾಲಿನ್ಯಗೊಂಡಿರುವುದರಿಂದ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ. ಕಾರ್ಖಾನೆಗಳ ತ್ಯಾಜ್ಯ ನೀರು ಮತ್ತು ಚರಂಡಿ ನೀರು ಕೆರೆಗೆ ಹರಿದು ಕೆರೆ ಮಾಲಿನ್ಯವಾಗಿದೆ ಎಂದು ಸ್ಥಳೀಯರು ಸಮಿತಿಗೆ ಮಾಹಿತಿ ನೀಡಿದರು.

ಹೆನ್ನಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಜೆ.ಪ್ರಸನ್ನಕುಮಾರ್‌ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆನ್ನಾಗರ, ಮಾಸ್ತೇನಹಳ್ಳಿ ಕೆರೆಗಳಿವೆ. ಹೆನ್ನಾಗರ ಕೆರೆ ಸಂರಕ್ಷಣೆ ದೃಷ್ಟಿಯಿಂದ ಪಂಚಾಯಿತಿ ಹಲವು ಬಾರಿ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ್ದರೂ ಕಾರ್ಖಾನೆಗಳು ತ್ಯಾಜ್ಯ ಕೆರೆಗೆ ಹರಿಸುತ್ತಿವೆ. ಇದರಿಂದಾಗಿ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದು ಗ್ರಾಮದಲ್ಲಿ ಕೆರೆಯಿದ್ದು ಇಲ್ಲದಂತಾಗಿದೆ. ಕೆರೆ ಸಂರಕ್ಷಿಸುವಂತೆ ಒತ್ತಾಯಿಸಿ ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಲಾಗಿತ್ತು. ಎನ್‌ಜಿಟಿ ಸಮಿತಿ ಸಮರ್ಪಕ ವರದಿ ನೀಡಿ ಕೆರೆ ಉಳಿಯುವಿಗೆ ನೆರವಾಗಬೇಕು ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತುಳಸಿನಾಥ್‌, ಭೂದಾಖಲೆಗಳ ಇಲಾಖೆಯ ದಿಲೀಪ್‌, ಗುರುವಯ್ಯ, ರಾಜಸ್ವ ನಿರೀಕ್ಷಕ ಮೋಹನ್‌, ಮುಖಂಡರಾದ ಮುನಿರಾಜು, ಲಕ್ಷ್ಮೀಕಾಂತ, ಯಾರಂಡಹಳ್ಳಿ ಹರೀಶ್‌, ಮರಿರಾಜು, ಕಿರಣ್‌ ಇದ್ದರು.

ಸಾರಾಂಶ

ಆನೇಕಲ್ : ಆನೇಕಲ್‌ ತಾಲ್ಲೂಕಿನ ವಿವಿಧ ಕೆರೆಗಳಲ್ಲಿ ಮಾಲಿನ್ಯ ಮತ್ತು ಆನೇಕಲ್: ತಾಲ್ಲೂಕಿನ ವಿವಿಧ ಕೆರೆಗಳಲ್ಲಿ ಮಾಲಿನ್ಯ ಮತ್ತು ಕೆರೆ ಒತ್ತುವರಿ ಬಗ್ಗೆ ಪರಿಶೀಲನೆ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದಂತೆ ನೇಮಕಗೊಂಡಿರುವ ಜಂಟಿ ಸಮಿತಿ ತಾಲ್ಲೂಕಿನ ಕೆರೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.