ADVERTISEMENT

ಚಂದಾಪುರದ ಚಂದ ಕೆಡಿಸುತ್ತಿರುವ ಕಸ: ದಂಡ ವಿಧಿಸಲು ಪುರಸಭೆ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:56 IST
Last Updated 16 ಜನವರಿ 2022, 19:56 IST
ಇಗ್ಗಲೂರು ಕೆರೆ ಬಳಿ ಕಸ ಎಸೆದವರಿಗೆ ಚಂದಾಪುರ ಪುರಸಭೆಯ ಮುಖ್ಯಾಧಿಕಾರಿ ರಮೇಶ್‌ ದಂಡ ವಿಧಿಸಿದರು
ಇಗ್ಗಲೂರು ಕೆರೆ ಬಳಿ ಕಸ ಎಸೆದವರಿಗೆ ಚಂದಾಪುರ ಪುರಸಭೆಯ ಮುಖ್ಯಾಧಿಕಾರಿ ರಮೇಶ್‌ ದಂಡ ವಿಧಿಸಿದರು   

ಆನೇಕಲ್: ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಚಂದಾಪುರ ಪುರಸಭೆ ಮುಖ್ಯಾಧಿಕಾರಿ ರಮೇಶ್‌ ನೇತೃತ್ವದ ತಂಡ ಬೆಳ್ಳಂ ಬೆಳಗ್ಗೆ ಕಾರ್ಯಚರಣೆಗೆ ಇಳಿದಿತ್ತು. ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದವರಿಗೆ ದಂಡ ಹಾಕುವ ಮೂಲಕ ತಂಡ ಸಾರ್ವಜನಿಕರಿಗೆ ಬಿಸಿ
ಮುಟ್ಟಿಸಿತು.

ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ಚಂದಾಪುರ ಪುರಸಭೆ ವ್ಯಾಪ್ತಿಯ ಇಗ್ಗಲೂರು ಕೆರೆಯ ಏರಿಯ ಮೇಲೆ ಮತ್ತು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಕೋಳಿಯ ತ್ಯಾಜ್ಯವನ್ನು ಏರಿಯ ಮೇಲೆಯೇ ಎಸೆದು ಹೋಗುತ್ತಿದ್ದಾರೆ. ಇದರಿಂದ ನಾಯಿಗಳು ಮಾಂಸದ ತುಂಡುಗಳಿಗಾಗಿ ಕೆರೆಯ ಸುತ್ತಮುತ್ತ ಜಮಾಯಿಸಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ದವು.

ಇಗ್ಗಲೂರು ಕೆರೆ ಮತ್ತು ಕೆರೆಯ ಸುತ್ತಮುತ್ತ ಕಸ ಹಾಕುವುದಕ್ಕೆ ಕಡಿವಾಣ ಹಾಕಬೇಕೆಂದು ತೀರ್ಮಾನ ಮಾಡಿದ ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡ ಕೆರೆಯ ಏರಿಯ ಮೇಲೆ ಮುಂಜಾನೆಯೇ ಕಾದು ಕುಳಿತಿದ್ದರು. ಕಸ ಹಾಕಲು ಬಂದವರಿಗೆ ದಂಡ ಹಾಕಿದರು. ಒಂದೇ ದಿನ ₹5 ಸಾವಿರ ದಂಡ ವಸೂಲಾಯಿತು.

ADVERTISEMENT

ಚಂದಾಪುರ ಪುರಸಭೆ ಮುಖ್ಯಾಧಿಕಾರಿ ರಮೇಶ್‌ ಮಾತನಾಡಿ, ಮನೆಗಳ ಬಳಿಯೇ ಕಸ ಸಂಗ್ರಹಿಸಲು ವಾಹನಗಳು ತೆರಳಿದಾಗ ಕಸ ಹಾಕುವುದಿಲ್ಲ. ನಂತರ ಕಸದ ಕವರ್‌ಗಳನ್ನು ಮುಖ್ಯ ರಸ್ತೆಯ ಡಿವೈಡರ್‌ಗಳ ಬಳಿ ಇಟ್ಟು ಹೋಗುವ ಪರಿಪಾಠವನ್ನು ಹಲವಾರು ಮಂದಿ ಮಾಡಿಕೊಂಡಿದ್ದಾರೆ. ಹಾಗಾಗಿಯೇ, ದಂಡ ವಸೂಲಿಗಾಗಿ ಮುಂಜಾನೆಯೇ ಹೋಗಿದ್ದೆವು ಎಂದರು.

ಸಾರ್ವಜನಿಕರು, ಅಂಗಡಿಗಳವರು ಪ್ರತಿದಿನ ಬರುವ ಪುರಸಭೆಯ ಕಸ ಸಂಗ್ರಹಣ ವಾಹನಗಳಿಗೆ ಕಸ ಹಾಕದೇ ಆನೇಕಲ್‌-ಚಂದಾಪುರ ರಸ್ತೆಯ ಡಿವೈಡರ್‌ಗಳಲ್ಲಿ ಕಸದ ಕವರ್‌ಗಳನ್ನು, ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಇದರಿಂದ ಪಟ್ಟಣದ ಅಂದ ಹಾಳಾಗಿದೆ ಎಂದು ಚಂದಾಪುರದ ಮಾದೇಶ್‌ ತಿಳಿಸಿದರು.

ಪ್ರಕರಣ ದಾಖಲು: ಎಚ್ಚರಿಕೆ ನೀಡಿದರೂ ಜನರು ಕೆರೆ ಮತ್ತು ರಸ್ತೆ ಡಿವೈಡರ್‌ ಬಳಿ ಹಾಕುವ ಕಸ ಹಾಕುವುದನ್ನು ಬಿಡುತ್ತಿಲ್ಲ. ಅನಿವಾರ್ಯವಾಗಿ ದಂಡ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ರಮೇಶ್‌ ತಿಳಿಸಿದರು.

ಸಾರಾಂಶ

ಆನೇಕಲ್ : ಕಸ ನಿರ್ವಹಣೆ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅತ್ಯಂತ ಸವಾಲಿನದ್ದಾಗಿದೆ. ಹಲವು ಬಾರಿ ತಿಳುವಳಿಕೆ ನೀಡಿದರೂ ಕಸವನ್ನು ಎಲ್ಲಂದರಲ್ಲಿ ಹಾಕುವುದು ಸಾಮಾನ್ಯವಾಗಿದೆ. ಎಲ್ಲಂದರಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಂದಾಪುರ ಪುರಸಭೆ ಮುಖ್ಯಾಧಿಕಾರಿ ರಮೇಶ್‌ ನೇತೃತ್ವದಲ್ಲಿ ಸಿಬ್ಬಂದಿ ಬೆಳ್ಳಂ ಬೆಳಗ್ಗೆ ಕಾರ್ಯಪ್ರವೃತರಾಗಿ ಎಲ್ಲಂದರಲ್ಲಿ ಕಸ ಹಾಕುತ್ತಿದ್ದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.