ಹೊಸಪೇಟೆ (ವಿಜಯನಗರ): ಜಿಲ್ಲೆಯ ಕೂಡ್ಲಿಗಿ, ಹರಪನಹಳ್ಳಿ ಹೊರತುಪಡಿಸಿದರೆ ಉಳಿದೆಲ್ಲ ತಾಲ್ಲೂಕುಗಳಲ್ಲಿ ಈ ವರ್ಷ ಭರಪೂರ ಮಳೆಯಾಗಿದೆ.
ಪ್ರಸಕ್ತ ಸಾಲಿನ ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದ ವರೆಗಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಎಲ್ಲೆಡೆ ಉತ್ತಮ ವರ್ಷಧಾರೆಯಾಗಿರುವುದು ಗೊತ್ತಾಗುತ್ತದೆ. ಕೊಟ್ಟೂರು, ಹಗರಿಬೊಮ್ಮನಹಳ್ಳಿಯಲ್ಲಿ ವಾರ್ಷಿಕ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ. ಹೊಸಪೇಟೆ, ಹೂವಿನಹಡಗಲಿಯಲ್ಲಿ ವಾರ್ಷಿಕ ಸರಾಸರಿಯಷ್ಟು ಮಳೆ ಸುರಿದಿದೆ. ಹರಪನಹಳ್ಳಿ, ಕೂಡ್ಲಿಗಿಯಲ್ಲಿ ಮಾತ್ರ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಆದರೆ, ಅಕ್ಟೋಬರ್‌ನಲ್ಲಿ ಹಿಂಗಾರು ಮಳೆ ಚುರುಕುಗೊಂಡಿರುವುದು ಈ ತಾಲ್ಲೂಕುಗಳ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.
ದಶಕದಲ್ಲಿ ಎರಡನೇ ಸಲ ಈ ರೀತಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹೋದ ವರ್ಷವೂ ಇದೇ ರೀತಿ ಉತ್ತಮ ಮಳೆಯಾಗಿತ್ತು. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯು ಕೊಟ್ಟೂರು, ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿಯ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿಯನ್ನು ಹಾಳು ಮಾಡಿ, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
ಇಷ್ಟರಲ್ಲೇ ಬಾಳೆ, ಭತ್ತ ಕಟಾವು ಆಗಲಿದೆ. ಆದರೆ, ತೇವಾಂಶ ಹೆಚ್ಚಾಗಿ ಭತ್ತದ ತೆನೆಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. ಬಾಳೆಗೊನೆಗಳು ಬಾಗುತ್ತಿವೆ. ಎರೆಭೂಮಿಯಲ್ಲಿ ಬೆಳೆದ ಬಾಳೆ ತೂಕ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕೃಷಿ ತಜ್ಞರು.
ಮೆಣಸಿನಕಾಯಿ, ಮುಸುಕಿನ ಜೋಳ, ಹತ್ತಿಗೂ ಅಪಾಯ ತಪ್ಪಿದ್ದಲ್ಲ. ಆದರೆ, ಇದೇ ವೇಳೆ ಈ ಮಳೆಯಿಂದ ಕಡಲೆ, ಜೋಳ ಬಿತ್ತನೆಗೆ ಬಹಳ ಅನುಕೂಲವಾಗಿದೆ. ಮಳೆಯಿಂದ ಬೆಳೆ ಕಳೆದುಕೊಂಡ ರೈತರು ಸಮಸ್ಯೆಯ ಸುಳಿಗೆ ಸಿಲುಕಿದರೆ ಕೆಲವರು ಹಿಂಗಾರು ಮಳೆ ಚುರುಕುಗೊಂಡಿರುವುದರಿಂದ ಸಂತಸದಲ್ಲಿದ್ದಾರೆ.
‘ಬಹಳ ಸಮಯದ ನಂತರ ಈ ವರ್ಷ ಹಿಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದೆ. ಇದರಿಂದಾಗಿ ಜೋಳ, ಕಡಲೆ ಬೆಳೆ ಬೆಳೆಯುವ ರೈತರಿಗೆ ಅನುಕೂಲವಾಗುತ್ತದೆ. ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಹೆಚ್ಚಿನ ಅವಧಿಗೆ ತೇವಾಂಶ ಇರುವುದರಿಂದ ಒಳ್ಳೆಯ ಫಸಲು ಬರುತ್ತದೆ’ ಎನ್ನುತ್ತಾರೆ ಕೊಟ್ಟೂರಿನ ರೈತ ಬಸವರಾಜ.
‘ಈ ವರ್ಷ ಮೆಣಸಿನಕಾಯಿ ಉತ್ತಮವಾಗಿ ಬೆಳೆದಿದೆ. ಆದರೆ, ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಇದೇ ರೀತಿ ಮಳೆ ಸುರಿದರೆ ಮೆಣಸಿನಕಾಯಿ ಹೊಲದಲ್ಲೇ ಕೊಳೆತು ಹೋಗಬಹುದು. ಈಗ ಮಳೆಯ ಅಗತ್ಯವಿಲ್ಲ’ ಎಂದು ಚಿನ್ನಾಪುರದ ರೈತ ಹುಲುಗಪ್ಪ ಹೇಳಿದರು.
ಎರಡನೇ ಬೆಳೆಗೆ ನೀರು: ತುಂಗಭದ್ರಾ ಜಲಾಶಯದಿಂದ ಈ ವರ್ಷದ ಡಿಸೆಂಬರ್ ಕೊನೆಯ ವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಅದರ ನಂತರ ನೀರಿನ ಸಂಗ್ರಹ ನೋಡಿಕೊಂಡು ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ನಿಗಮ ತಿಳಿಸಿದೆ.
ಆದರೆ, ಅಕ್ಟೋಬರ್ ಎರಡನೇ ವಾರದಲ್ಲೂ ಜಲಾಶಯ ಸಂಪೂರ್ಣ ತುಂಬಿದೆ. ಈಗಲೂ ಸರಾಸರಿ 30,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಎರಡನೇ ಬೆಳೆಗೆ ನೀರು ಹರಿಸಲು ಯಾವುದೇ ಸಮಸ್ಯೆ ಎದುರಾಗದು ಎಂಬುದು ರೈತರ ನಿರೀಕ್ಷೆ.
/ಬಾಕ್ಸ್/
ವಿಜಯನಗರ ಜಿಲ್ಲೆಯಲ್ಲಿ ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದ ವರೆಗೆ ಸುರಿದ ತಾಲ್ಲೂಕುವಾರು ಮಳೆ ಪ್ರಮಾಣ (ಸೆಂ.ಮೀ.ಗಳಲ್ಲಿ)
ತಾಲ್ಲೂಕು;ಸರಾಸರಿ ಮಳೆ;ಆದ ಮಳೆ
ಹೊಸಪೇಟೆ;44.5;44.8
ಹೂವಿನಹಡಗಲಿ;36;37
ಹಗರಿಬೊಮ್ಮನಹಳ್ಳಿ39.8;44.3
ಹರಪನಹಳ್ಳಿ;43.5;40.1
ಕೊಟ್ಟೂರು;34.2;37.3
ಕೂಡ್ಲಿಗಿ;36.5;31.9
(ಮೂಲ: ಕೃಷಿ ಇಲಾಖೆ)
ಮತ್ತಷ್ಟು ತಗ್ಗಿದ ಒಳಹರಿವು
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಸೋಮವಾರ ಮತ್ತಷ್ಟು ತಗ್ಗಿದೆ. ಸದ್ಯ ಜಲಾಶಯಕ್ಕೆ 28,954 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ.
ಭಾನುವಾರ 45,800 ಕ್ಯುಸೆಕ್ ಒಳಹರಿವು ಇತ್ತು. ಸಂಪೂರ್ಣ ಮುಳುಗಡೆಯಾಗಿದ್ದ ಹಂಪಿಯ ಪುರಂದರ ಮಂಟಪ, ವಿಜಯನಗರದ ಕಾಲು ಸೇತುವೆಗಳು ಈಗ ಗೋಚರಿಸುತ್ತಿವೆ.
ಜಿಲ್ಲೆಯ ಕೂಡ್ಲಿಗಿ, ಹರಪನಹಳ್ಳಿ ಹೊರತುಪಡಿಸಿದರೆ ಉಳಿದೆಲ್ಲ ತಾಲ್ಲೂಕುಗಳಲ್ಲಿ ಈ ವರ್ಷ ಭರಪೂರ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.