ADVERTISEMENT

ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ತೆರಿಗೆ ನಿರೀಕ್ಷೆ: ನಸರುಲ್ಲಾ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 13:08 IST
Last Updated 10 ಜನವರಿ 2024, 13:08 IST
ಕೊಟ್ಟೂರಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ 2024 – 25 ನೇ ಸಾಲಿನ ಬಜೆಟ್ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿದರು
ಕೊಟ್ಟೂರಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ 2024 – 25 ನೇ ಸಾಲಿನ ಬಜೆಟ್ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಕೊಟ್ಟೂರು: ಪ್ರಸಕ್ತ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯ್ತಿ ಕಛೇರಿಯ ಶ್ರೀ ಕೊಟ್ಟೂರೇಶ್ವರ ಸಭಾಂಗಣದಲ್ಲಿ ಬುಧವಾರ ನಡೆದ 2024 – 25 ನೇ ಸಾಲಿನ ಬಜೆಟ್ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ADVERTISEMENT

ಕಳೆದ ಸಾಲಿನಲ್ಲಿ ಆಸ್ತಿ ತೆರಿಗೆ, ಪರವಾನಿಗೆ ಶುಲ್ಕ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಮುಂತಾದ ತೆರಿಗೆಗಳಿಂದ ₹4 ಕೋಟಿ ಸಂಗ್ರಹವಾಗಿತ್ತು ಎಂದರು.

ಮುಂಬರುವ ಸಾಲಿನಲ್ಲಿ ಇನ್ನೂ ಹೆಚ್ಚಿನ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದು ಇದಕ್ಕೆ ಪೂರಕವಾಗಿ ಬಜೆಟ್ ಮಂಡನೆಗೆ ಕ್ರಿಯಾ ಯೋಜನೆ ತಯಾರಿಸಬೇಕಾಗಿರುವುದರಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಭೆಯಲ್ಲಿ ಮುಖ್ಯಾಧಿಕಾರಿ ಮನವಿ ಮಾಡಿದರು.

ಪಟ್ಟಣ ಪಂಚಾಯ್ತಿ ಸದಸ್ಯ ತೋಟದ ರಾಮಣ್ಣ ಮಾತನಾಡಿ, 20 ವಾರ್ಡಗಳಿಗೂ ಹಂಚಿಕೆಯಾದ ಅನುದಾನವನ್ನು ಅದೇ ವಾರ್ಡುಗಳ ಕಾಮಗಾರಿಗೆ ಬಳಸಬೇಕು ಹಾಗೂ ಮೀಸಲಿಟ್ಟ ಅನುದಾನವನ್ನು ಬೇರೆ ಕಾಮಗಾರಿಗೆ ಬಳಕೆ ಮಾಡದಂತೆ ಮುನ್ನೆಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯ ಜಿ.ಎಂ.ಸಿದ್ದಯ್ಯ ಮಾತನಾಡಿ, ಪಟ್ಟಣದ ವಿವಿಧ ಸ್ಥಳಗಳಲ್ಲಿ ನಿರ್ಮಲ ಶೌಚಾಲಯಗಳು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಸಾಲಿನ ಬಜೆಟ್ ನಲ್ಲಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಡಿ.ಎಸ್.ಎಸ್.ಮುಖಂಡ ಬಿ.ಮರಿಸ್ವಾಮಿ ಮಾತನಾಡಿ, ಪಟ್ಟಣದ ಎಲ್ಲಾ ವಾರ್ಡಗಳಿಂದ ಸಂಗ್ರಹವಾಗುವ ಕೊಳಚೆ ಮತ್ತು ತಾಜ್ಯ ನೀರನ್ನು ಹ್ಯಾಳ್ಯಾ ರಸ್ತೆಯ ಮುಖ್ಯ ಕಾಲುವೆಯ ಮೂಲಕ ಹರಿಸುತ್ತಿರುವುದರಿಂದ ಹ್ಯಾಳ್ಯಾ ರಸ್ತೆಯಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಇದರ ಬದಲಾಗಿ ಪಟ್ಟಣದ ಬೇರೆ ಮಾರ್ಗಗಳ ಮೂಲಕ ತ್ಯಾಜ್ಯ ಹರಿಸಲು ಮುಂದಾಗಬೇಕು. ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡಿದ ಸಲಹೆ ಸೂಚನೆಗಳನ್ನು ಪರಿಗಣಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಮರಬದ ಕೊಟ್ರೇಶ್‌, ಹೊಸಮನಿ ವಿನಯಕುಮಾರ್, ಶಫಿ, ಕಾಸಲ ಸಾವಿತ್ರಮ್ಮ , ಶೈಲಜಾ, ವಿದ್ಯಾಶ್ರೀ, ಟಿ.ಜಗದೀಶ್‌, ಕೆಂಗರಾಜ, ವೀಣಾ ವಿವೇಕಾನಂದಗೌಡ , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.