ಹೊಸಪೇಟೆ (ವಿಜಯನಗರ): ‘ಅಸ್ಪೃಶ್ಯತೆ ಹೆಸರಿನಲ್ಲಿ ಇನ್ನೆಷ್ಟು ದಿನ ಅವಮಾನ ಸಹಿಸಿಕೊಂಡು ಬದುಕಬೇಕು. ಅವಮಾನ ಬಿಟ್ಟು ಸ್ವಾಭಿಮಾನದ ಬದುಕು ಬದುಕೋಣ. ಅದು ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹದಾಸೆಯೂ ಆಗಿತ್ತು’ ಎಂದು ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 65ನೇ ವರ್ಷಾಚರಣೆ ನಿಮಿತ್ತ ಗುರುವಾರ ಸಂಜೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಾದಿ-ಬೀದಿಯಲ್ಲಿ ಬಿಸಿಲಲ್ಲಿ ನಿಂತು ದಣಿದದ್ದು ಸಾಕು. ಒಳಗೆ ಕರೆಯದ ಗುಡಿ ಗುಂಡಾರದ ಮುಂದು ಭಿಕ್ಷೆ ಬೇಡಿದ್ದು ಸಾಕು. ಕರೆಯದೇ ಒಳ ಪ್ರವೇಶ ಮಾಡಿದ್ದಕ್ಕೆ ಒದೆಸಿಕೊಂಡದ್ದು ಸಾಕು. ಪರಿಶಿಷ್ಟರು ಮೀಸೆ ಬಿಟ್ಟಿದ್ದಕ್ಕೆ ಬಡಿದು ಕೊಂದರು. ಕುದುರೆ ಹತ್ತಿದ್ದಕ್ಕೆ ಮಾರಣಹೋಮ ನಡೆಸಿದರು. ಮಂತ್ರಿಯಾದರೂ ಹಟ್ಟಿಗೆ ಬಿಡಲಿಲ್ಲ. ಯಲ್ಲಮನ ಹೆಸರಲ್ಲಿ ಬೆತ್ತಲು ಪೂಜೆ ಮಾಡಲು ಪ್ರೋತ್ಸಾಹಿಸಿದ ಗೊಡ್ಡು ವ್ಯವಸ್ಥೆಯಿಂದ ಹೊರಬಂದು ಗೌರವದಿಂದ ಬದುಕಬೇಕಿದೆ’ ಎಂದು ಹೇಳಿದರು.
ಅಂಬೇಡ್ಕರ್ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಸಿ.ವೀರಸ್ವಾಮಿ ಮಾತನಾಡಿ, ‘ಬೌದ್ಧ ಧರ್ಮವೆಂಬ ನಮ್ಮ ಸ್ವಂತ ಮನೆಯಿರಲು ನಮಗೇಕೆ ಹಂಗಿನ ಮನೆ. ನಾವು ಅನುಭವಿಸಿದ ಜಾತಿಯ ದೌರ್ಜನ್ಯ ನಮ್ಮಕ್ಕಳಿಗೆ ಬಾರದಿರಲು ಈಗಿನಿಂದಲೇ ಪಣ ತೊಡೋಣ’ ಎಂದರು.
ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ವಾಸುದೇವ್, ಮುಖಂಡರಾದ ಮರಡಿ ಜಂಬಯ್ಯ ನಾಯಕ, ದುರುಗಪ್ಪ ಪೂಜಾರ್, ಕೃಷ್ಣಪ್ಪ, ಸಣ್ಣ ಈರಪ್ಪ, ಹನುಮಂತಪ್ಪ, ಜೆ. ಶಿವುಕುಮಾರ್, ಭರತ್, ನಿಂಬಗಲ್ ರಾಮಕೃಷ್ಣ, ಮುದುಕಪ್ಪ, ಬಸವರಾಜ್, ಶಬ್ಬೀರ್, ಮಾರಣ್ಣ, ಓಬಳೇಶ್, ಸ್ಲಂ ವೆಂಕಟೇಶ್, ವಿಜಯ್, ಜಯಪ್ಪ, ನರಸಿಂಹಲು, ಸಜ್ಜಾದ್ ಖಾನ್, ಅರುಣ್ ಕುಮಾರ್, ಯೋಹಾನ್ ಇದ್ದರು.
‘ಅಸ್ಪೃಶ್ಯತೆ ಹೆಸರಿನಲ್ಲಿ ಇನ್ನೆಷ್ಟು ದಿನ ಅವಮಾನ ಸಹಿಸಿಕೊಂಡು ಬದುಕಬೇಕು. ಅವಮಾನ ಬಿಟ್ಟು ಸ್ವಾಭಿಮಾನದ ಬದುಕು ಬದುಕೋಣ. ಅದು ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹದಾಸೆಯೂ ಆಗಿತ್ತು’ ಎಂದು ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.