ಗುರುಮಠಕಲ್: ಪಟ್ಟಣದಲ್ಲಿ ಶುಕ್ರವಾರ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ರೈತರು ವಿವಿಧ ಬಡಾವಣೆಗಳಲ್ಲಿ ಸಂಜೆ ಎತ್ತುಗಳನ್ನು ಅಲಂಕಾರಗೊಳಿಸಿ ಮೆರವಣಿಗೆ ಮಾಡಿದರು.
ಸಮೀಪದ ಕಾಕಲವಾರ ಗ್ರಾಮದಿಂದ ದೇಶಮುಖರ ಎತ್ತುಗಳನ್ನು ಪ್ರತಿ ವರ್ಷ ಇಲ್ಲಿನ ನಾನಾಪೂರ ಬಡಾವಣೆಯ ಭವಾನಿ ದೇವಸ್ಥಾನದ ಹತ್ತಿರ ಮೆರವಣಿಗೆ ಮಾಡಲಾಗುತ್ತದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಸ್ಥಳೀಯರಾದ ಬನ್ನಿ ಹೇಳಿದರು.
ಕಾಕಲವಾರದಿಂದ ಎತ್ತುಗಳನ್ನು ಬಣ್ಣದ ಚಿತ್ತಾರ, ರೇಷ್ಮೆ ಸೀರೆ, ಗೊಂಡಾ, ಬಾಸಿಂಗ, ಜೂಲಾ, ಗೆಜ್ಜೆಸರ, ಗಂಟೆ ಸರ ಹಾಗೂ ಬಣ್ಣ-ಬಣ್ಣದ ರಿಬ್ಬನ್ನುಗಳಿಂದ ಸಿಂಗರಿಸಿಕೊಂಡು ಬರಲಾಗಿತ್ತು. ಪಟ್ಟಣಕ್ಕೆ ಬಂದ ಎತ್ತುಗಳನ್ನು ಊರಿನ ಮಾಲಿಗೌಡ ಜಿ.ರವೀಂದ್ರರೆಡ್ಡಿ ಅವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.
ನಂತರ ಎತ್ತುಗಳನ್ನು ಪೂಜಿಸಿ ಭವಾನಿ ಮಂದಿರದಿಂದ ಪುರಾತನ ಕಮಾನಿನವರೆಗೆ ಬಾಜಾ–ಬಜಂತ್ರಿ, ಹಲಿಗೆ, ವಾದ್ಯಗಳೊಂದಿಗೆ ಐದು ಸುತ್ತು ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು.
ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿನ ಜನ ಮೆರವಣಿಗೆ ಹಾಗೂ ತೋರಣ ಹರಿಯುವ ಆಚರಣೆಯನ್ನು ವೀಕ್ಷಿಸಿದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.