ADVERTISEMENT

‘ಅತಂತ್ರದ ಮಾತೇ ಇಲ್ಲ; ಸ್ಪಷ್ಟ ಬಹುಮತ’

ಸಿ.ಎಂ ಯಾರು?: ಶಾಸಕರ ಅಭಿಪ್ರಾಯದಂತೆ ಹೈಕಮಾಂಡ್ ತೀರ್ಮಾನ

JANARDHANA REDDY MUKKAMALLA
Published 9 ಏಪ್ರಿಲ್ 2023, 10:06 IST
Last Updated 9 ಏಪ್ರಿಲ್ 2023, 10:06 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ‘ಈ ಬಾರಿ ಅತಂತ್ರ ಸ್ಥಿತಿಯ ಮಾತೇ ಇಲ್ಲ. ಈ ಅನುಮಾನ ಯಾರಿಗೂ ಬೇಡ. ನಾವು ಸ್ಪಷ್ಟ ಬಹುಮತ ಪಡೆದು, ಸ್ವಂತ ಬಲದಿಂದ ಸರ್ಕಾರ ರಚಿಸುತ್ತೇವೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅತೀವ ವಿಶ್ವಾಸ ವ್ಯಕ್ತಪಡಿಸಿದರು.

‌‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ಸಂವಾದದಲ್ಲಿ ಮಾತನಾಡಿದ ಅವರು, ‘ನಾನೇ ಆಗಲಿ, ಡಿ.ಕೆ. ಶಿವಕುಮಾರ್, ಪರಮೇಶ್ವರ ಹೀಗೆ ಯಾರೇ ಆಗಲಿ‌ ಮುಖ್ಯಮಂತ್ರಿ ಆಗ ಬೇಕೆಂದು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಚುನಾಯಿತ ಶಾಸಕ‌ರು ಅವರ ನಾಯಕನನ್ನು ಆಯ್ಕೆ ಮಾಡುತ್ತಾರೆ. ಶಾಸಕರ ಅಭಿಪ್ರಾಯ ಆಧರಿಸಿ ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್‌ ತೀರ್ಮಾನ ತೆಗೆದು ಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಜನರನ್ನು ಕಾಡು ತ್ತಿದೆ. ರೈತರ ಸಮಸ್ಯೆ ಬಗೆಹರಿದಿಲ್ಲ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಸೇಡಿನ ರಾಜಕೀಯದಿಂದ ಸಾಮರಸ್ಯ ಹಾಳಾ ಗಿದೆ. ಅವರು (ಬಿಜೆಪಿ) ಹಿಂದುತ್ವದ ಮೂಲಕ ಮತ ಕ್ರೋಡೀಕರಣ, ಧ್ರುವೀಕರಣಕ್ಕೆ ಹೊರಟಿದ್ದಾರೆ. ಲಂಚದ ಕಷ್ಟಕ್ಕೆ ಒಳಗಾಗಿ ಜನ ನರಳುತ್ತಿದ್ದಾರೆ. ಕಷ್ಟ, ಸುಖಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ, ನಮ್ಮ ಕೈಗೆ ಅಧಿಕಾರ ನೀಡಬೇಕೆಂದು ರಾಜ್ಯದ ಜನರೇ ಇಚ್ಛೆ ವ್ಯಕ್ತಪಡಿಸಿದ್ದಾರೆ’ ಎಂದು ತಮ್ಮ ವಿಶ್ವಾಸಕ್ಕೆ ಸಿದ್ದರಾಮಯ್ಯ ಬಲ ತುಂಬಿದರು. 

ADVERTISEMENT

‘ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದೇನೆ.‌ ಜನರ ನಾಡಿಮಿಡಿತ ಗಮನಿಸಿದ್ದೇನೆ. ಕಾಂಗ್ರೆಸ್‌ ಪರ ಅಲೆ ಯಿದೆ. ಜನ ಬದಲಾವಣೆ ಬಯಸಿದ್ದಾರೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ’ ಎಂದೂ ಪುನರುಚ್ಚರಿಸಿದರು.

‘ಜನ ಅಭಿವೃದ್ಧಿ ಬಯಸಿದ್ದಾರೆ. ಆದರೆ, ಈಗಿರುವುದು ಶೇ 40 ಕಮಿಷನ್‌ ಸರ್ಕಾರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರ ಎಲ್ಲ ಸರ್ಕಾರಿ ಕಚೇರಿಗಳನ್ನೂ ‌ವ್ಯಾಪಿಸಿದೆ. ಅದು ಜನರಿಗೆ ನೇರವಾಗಿ ಅನುಭವಕ್ಕೆ ಬಂದಿದೆ. ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರ ಪುತ್ರ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿಲ್ಲವೇ? ಇದು ಭ್ರಷ್ಟಾಚಾರಕ್ಕೆ ಸಾಕ್ಷ್ಯ ಅಲ್ಲವೇ? ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಮರಣಪತ್ರದಲ್ಲಿ ತನ್ನ ಸಾವಿಗೆ ಈಶ್ವರಪ್ಪನೇ ಕಾರಣ ಎಂದು ಬರೆದಿರಲಿಲ್ಲವೇ? ಶೇ 40 ಕಮಿಷನ್‌ ಕಾರಣಕ್ಕೆ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್‌ ಪತ್ನಿ ಕೂಡಾ ಅದೇ ಹೇಳಿಕೆ ನೀಡಿದ್ದರು. ಭ್ರಷ್ಟ ಸರ್ಕಾರದ ವಿರುದ್ಧ ಬಲವಾದ ಆಡಳಿತ ವಿರೋಧಿ ಗಾಳಿ ಬೀಸುತ್ತಿದೆ’ ಎಂದರು.

‘ಮೀಸಲಾತಿ ಪ್ರಮಾಣ ಹೆಚ್ಚಿಸಿ ಹಂಚಿಕೆ ಮಾಡಬೇಕಾಗಿತ್ತು’

‘ನಮ್ಮ ಪಕ್ಷ ಮೀಸಲಾತಿ ಪರವಾಗಿದೆ. ಆದರೆ, ಮುಸ್ಲಿಮರಿಂದ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಡುವ ಬದಲು ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಿ ನೀಡಬೇಕಿತ್ತು. ಕಾನೂನು ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು.

‘ಒಕ್ಕಲಿಗರು ಕೇಳಿದ್ದು ಶೇ 12ರಷ್ಟು, ಪಂಚಮಸಾಲಿ ಸಮುದಾಯ ದವರು ಕೇಳಿದ್ದು 2 ಎಗೆ ಸೇರ್ಪಡೆ ಮಾಡಬೇಕು ಎಂದು. ಅದನ್ನು ಬಿಟ್ಟು, ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಕಿತ್ತುಕೊಟ್ಟಿದ್ದೇಕೆ. ಇದು ದ್ವೇಷದ ರಾಜಕಾರಣವಲ್ಲವೇ’ ಎಂದು ಪ್ರಶ್ನಿಸಿದರು.

‘ಚಿನ್ನಪ್ಪರೆಡ್ಡಿ ಆಯೋಗದ ವರದಿ ಆಧಾರದಲ್ಲಿ 1995ರಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿತ್ತು. 28 ವರ್ಷಗಳಿಂದ ಯಾವುದಾದರೂ ನ್ಯಾಯಾಲಯ ಮೀಸಲಾತಿಯನ್ನು ತೆಗೆಯಲು ಸೂಚಿಸಿತ್ತೇ? ನಮ್ಮ ಸರ್ಕಾರ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಮುಸಲ್ಮಾನರಿಗೆ ಮೀಸಲಾತಿ ಕೊಡುತ್ತೇವೆ’ ಎಂದು ಮಾತು ಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.