ಬಸವಕಲ್ಯಾಣ: ತಾಲ್ಲೂಕಿನ ಬೇಲೂರಿನ ಸಿದ್ದರಾಮೇಶ್ವರ ಕೆರೆಯಲ್ಲಿನ ಹೂಳನ್ನು ರೈತರು ಸ್ವಂತ ಖರ್ಚಿನಿಂದ ತೆಗೆದು ಒಳಗೆ ನಾಲೆ ನೀರು ಭರ್ತಿ ಮಾಡುವ ಯೋಜನೆ ಕೈಗೊಂಡಿದ್ದರಿಂದ ಈ ಬಾರಿ ಹೆಚ್ಚಿನ ನೀರು ಸಂಗ್ರಹಗೊಂಡಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಿದೆ.
ಪ್ರಖರ ಬಿಸಿಲಿನಲ್ಲಿಯೂ ಸಾಕಷ್ಟು ನೀರು ಲಭ್ಯವಿದ್ದು, ಉಪಯೋಗಕ್ಕೆ ಬರುತ್ತಿದೆ.
ಈ ಕೆರೆ ಪುರಾತನವಾದುದು. 12 ನೇ ಶತಮಾನದಲ್ಲಿ ಬಸವಣ್ಣನವರ ಜತೆಗಿದ್ದ ಸಿದ್ದರಾಮೇಶ್ವರರು ಈ ಭಾಗದಲ್ಲಿ ಅನೇಕ ಕೆರೆಗಳನ್ನು ಕಟ್ಟಿಸಿದ್ದರು. ಅವರೇ ಈ ಕೆರೆಯನ್ನು ಕೂಡ ನಿರ್ಮಿಸಿದ್ದಾರೆ. ಪುಷ್ಕರಣಿಯಂತೆ ದಂಡೆಯಲ್ಲಿ ಕಟ್ಟಿದ್ದ ಮೆಟ್ಟಿಲುಗಳ ಅವಶೇಷಗಳು ಇವೆ. ಅವರ ದೇವಸ್ಥಾನವೂ ಕೆರೆ ದಂಡೆಯಲ್ಲಿದ್ದು, ಕೆರೆಗೆ ಸಿದ್ದರಾಮೇಶ್ವರ ಕೆರೆ ಎಂದೇ ಹೆಸರಿದೆ.
ನಾಲೆ ನೀರು ಭರ್ತಿ ಮಾಡಿ ಕೆರೆಯನ್ನು ತುಂಬಿಸುತ್ತಿದ್ದ ಹಳೆಯ ಕಾಲದ ವ್ಯವಸ್ಥೆ ಈಗಲೂ ಇಲ್ಲಿ ಕಾಣಲು ಸಿಗುತ್ತದೆ. ನಾಲೆ ನೀರು ಕೆರೆಗೆ ಸಾಗಿಸಲು ಕಟ್ಟಿದ್ದ ಕೆತ್ತನೆಯ ಕಲ್ಲುಗಳ ಕಾಲುವೆ ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ, ಕೆರೆಯಲ್ಲಿ ಹೂಳು ತುಂಬಿದ್ದರಿಂದ ಮತ್ತು ಕೆರೆಗೆ ನೀರು ಹರಿದುಬರುವ ಕಾಲುವೆ ಕಲ್ಲು ಮಣ್ಣಿನಿಂದ ಮುಚ್ಚಿದ್ದರಿಂದ ಒಳಗೆ ಹೆಚ್ಚಿನ ಪ್ರಮಾಣದ ನೀರು ನಿಲ್ಲುತ್ತಿರಲಿಲ್ಲ. ಕೆರೆ ಅಂಗಳದಲ್ಲಿ ಗಿಡಗಂಟೆಗಳು ಬೆಳೆದು ಇಲ್ಲಿ ಕೆರೆ ಇದೆಯೋ ಇಲ್ಲವೋ ಎನ್ನುವಂತಾಗಿತ್ತು.
ಕೆಲ ವರ್ಷಗಳಿಂದ ಮಳೆಯ ಕೊರತೆಯಾಗಿ ಹೊಲಗಳಲ್ಲಿನ ಬಾವಿ ಮತ್ತು ಕೊಳವೆಬಾವಿಗಳಲ್ಲಿನ ನೀರು ತಳ ಕಂಡಿತ್ತು. ಕೆರೆ, ನಾಲೆಗಳಲ್ಲಿನ ನೀರು ಕೂಡ ಬೇಸಿಗೆ ಪೂರ್ವದಲ್ಲಿಯೇ ಒಣಗಿ ಜಾನುವಾರುಗಳಿಗೂ ಕುಡಿಯಲು ನೀರು ದೊರಕದೆ ಪರದಾಡುವಂತಾಗಿತ್ತು.
ಆಗ ಸಿದ್ದರಾಮೇಶ್ವರ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಕೆರೆಯ ಹೂಳು ತೆಗೆದರೆ ನೀರು ಸಿಗಬಹುದೆಂದು ಯೋಚಿಸಿ ಹೂಳು ತೆಗೆಯುವ ನಿರ್ಧಾರ ಕೈಗೊಂಡರು. ಹೂಳನ್ನು ಸಾಗಿಸಲು ಯೋಜನೆ ರೂಪಿಸಲಾಯಿತು.
‘ಕೆರೆಯಲ್ಲಿನ ಮಣ್ಣು ಫಲವತ್ತಾಗಿದ್ದು, ಹೊಲಕ್ಕೆ ಹಾಕಿದರೆ ಉತ್ತಮ ಬೆಳೆ ಬರುತ್ತದೆ. ಯಾರು ಬೇಕಾದರೂ ಮಣ್ಣು ಸಾಗಿಸಬಹುದು ಎಂದು ಗ್ರಾಮಸ್ಥರಿಗೆ ಸೂಚಿಸಲಾಯಿತು. ಇದಕ್ಕೆ ರೈತರು ಕೂಡ ಆಸಕ್ತಿ ತೋರಿಸಿದರು. ಇಲ್ಲಿನ ಮಣ್ಣನ್ನು ತೆಗೆದುಕೊಂಡು ಹೋದರು. ಹೂಳು ತೆಗೆದಿದ್ದರಿಂದ ಕೆರೆಯ ಆಳ ಸುಮಾರು ಐದು ಅಡಿಗಳಷ್ಟು ಹೆಚ್ಚಿತು’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ಮೆಂಡೋಳೆ ಹೇಳುತ್ತಾರೆ.
‘ಕೆರೆಯಲ್ಲಿ ಪಕ್ಕದ ಶಿವಲಿಂಗಿ ನಾಲೆಯಲ್ಲಿ ನೀರು ಭರ್ತಿ ಮಾಡುವ ಹಳೆಯ ವ್ಯವಸ್ಥೆ ಇತ್ತು. ಆದರೂ ಕಾಲುವೆ ಹದಗೆಟ್ಟಿದ್ದರಿಂದ ಹೊಸ ಕಾಲುವೆ ನಿರ್ಮಿಸಲಾಯಿತು. ಇದರಿಂದ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಗೊಂಡಿತು’ ಎಂದು ರೇವಣಸಿದ್ದಪ್ಪ ಪಾಟೀಲ ಮತ್ತು ವೀರಶೆಟ್ಟೆಪ್ಪ ಮಲಶೆಟ್ಟಿ ಹೇಳುತ್ತಾರೆ.
ಗ್ರಾಮಸ್ಥರ ಪ್ರಯತ್ನದಿಂದಾಗಿ ಕೆರೆ ಹೂಳು ತೆಗೆದ ಪರಿಣಾಮ ಕೆರೆಯಲ್ಲಿ ಬೇಸಿಗೆಯಲ್ಲಿಯೂ ಸಾಕಷ್ಟು ನೀರಿದೆ. ಗ್ರಾಮದಲ್ಲಿನ ಹಾಗೂ ಸುತ್ತಲಿನ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿನ ಅಂತರ್ಜಲದ ಮಟ್ಟ ಹೆಚ್ಚಿದೆ. ಕುಡಿಯುವ ನೀರಿಗೆ ಮತ್ತು ಹೊಲಗಳಲ್ಲಿನ ನೀರಾವರಿಗೆ ಇದರಿಂದ ಅನುಕೂಲವಾಗಿದೆ. ಇಂತಹ ಪ್ರಯತ್ನ ಇತರ ಗ್ರಾಮಗಳಿಗೂ ಮಾದರಿಯಾಗಿದೆ.
ಮಾಣಿಕ ಆರ್. ಭುರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.