ಮಂಗಳೂರು: ಉಡುಪಿಯ ಶಿರೂರು ಮಠದ ಲಕ್ಷ್ಮೀವರ ತೀರ್ಥರ ಅಕಾಲಿಕ ಸಾವಿನ ಕುರಿತು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಕುರಿತು ಮಠದ ಭಕ್ತರು ಮತ್ತು ಮಾಧ್ವ ಸಮುದಾಯದ ವತಿಯಿಂದ ಪ್ರತಿರೋಧ ವ್ಯಕ್ತವಾಗಿದೆ.
‘ಶ್ರೀಮಠದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂಬುದಾಗಿ ಮಾಧ್ವ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ‘ಎಲ್ಲ ಸಂಸ್ಥೆಗಳಲ್ಲಿಯೂ ಏರುಪೇರುಗಳಿರುವುದು ಸಹಜ. ಸಮಸ್ಯೆಗಳನ್ನು ಸರಿಪಡಿಸಲು ಮತ್ತು ಮಧ್ವಾಚಾರ್ಯರ ತತ್ವಗಳನ್ನು ಪ್ರಸಾರ ಮಾಡಲು ಸಮುದಾಯದ ಮುಖಂಡರು ಶ್ರಮಿಸುತ್ತಿದ್ದಾರೆ. ಹಾಗಿರುವಾಗ ಲಕ್ಷ್ಮೀವರ ತೀರ್ಥರ ಹೆಸರನ್ನು ಉಲ್ಲೇಖಿಸಿ ಮಠದ ಕುರಿತು ಋಣಾತ್ಮಕ ಚರ್ಚೆಗಳು ಸಲ್ಲದು’ ಎಂಬ ಮಾತುಗಳು ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.
ಉಡುಪಿಯ ಅಷ್ಟಮಠದ ಮಾಧ್ವ ಬ್ರಾಹ್ಮಣ ಶಿಷ್ಯರಿಗಾಗಲಿ ಅದರ ಯತಿಗಳಿಗಾಗಲಿ, ಪೇಜಾವರ ಶ್ರೀಗಳಿಗಾಗಲಿ ಅಥವಾ ಶ್ರೀಕೃಷ್ಣನ ಭಕ್ತರಿಗಾಗಲೀ ಇಂತಹ ಕ್ಲಿಷ್ಟಕರ ಸನ್ನಿವೇಶ ನಿರ್ವಹಿಸುವ ಸಾಮರ್ಥ್ಯವಿದೆ ಎನ್ನುವ ಸಿಟ್ಟಿನ ಸಾಲುಗಳು ಇವೆ.
ಸನ್ಯಾಸ ಧರ್ಮ ಪಾಲಿಸಿಲ್ಲ ಎಂದು ಬೊಬ್ಬಿಡುವವರು ಗೃಹಸ್ಥ ಧರ್ಮವನ್ನು ಎಷ್ಟರಮಟ್ಟಿಗೆ ಪಾಲಿಸಿದ್ದಾರೆ ಎಂಬ ವಿಮರ್ಶೆ ಮಾಡಿಕೊಳ್ಳಬೇಕಲ್ಲವೇ ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ. ಸ್ವಯಂ ದುಡಿಮೆಯಿಂದ ಸಂಸಾರ ನಿರ್ವಹಣೆ, ಮೋಸ, ಕಳ್ಳತನದಿಂದ ದೂರ ಇರುವ, ದಾನ ಧರ್ಮಗಳನ್ನು ಮಾಡುವ ಗೃಹಸ್ಥ ಧರ್ಮವನ್ನು ಉಲ್ಲಂಘಿಸಿದವರ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ ಏಕೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಶಿರೂರು ಸ್ವಾಮೀಜಿ ಸಾವಿನ ಕುರಿತು ತನಿಖೆಯ ನೇತೃತ್ವ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಪಾರದರ್ಶಕವಾಗಿ ನಡೆಯಬೇಕು ಎಂಬುದಾಗಿ ಕೇಮಾರು ಶ್ರೀ ಈಶವಿಠಲ ದಾಸ ಸ್ವಾಮೀಜಿ ಅವರು ನೀಡಿರುವ ಹೇಳಿಕೆಗೂ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಶಿರೂರು ಶ್ರೀಗಳ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕೇಮಾರು ಶ್ರೀಗಳು ಅವರ ಸಾವು ಸಂಭವಿಸಿದ ಕೂಡಲೇ ಅಕ್ರಮಗಳ ಬಗ್ಗೆ ಭಾಷಣ ಮಾಡಲು ಶುರು ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.