ADVERTISEMENT

ಅಪ್ಪು ಜನ್ಮದಿನಕ್ಕೆ ಪ್ರೈಂನಲ್ಲಿ ‘ಗಂಧದಗುಡಿ’

ಅಪ್ಪು ಜನ್ಮದಿನಕ್ಕೆ

JANARDHANA REDDY MUKKAMALLA
Published 14 ಮಾರ್ಚ್ 2023, 6:42 IST
Last Updated 14 ಮಾರ್ಚ್ 2023, 6:42 IST
ಗಂಧದಗುಡಿ ಸಿನಿಮಾ ಪೋಸ್ಟರ್‌
ಗಂಧದಗುಡಿ ಸಿನಿಮಾ ಪೋಸ್ಟರ್‌   

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಒಟಿಟಿ ರಿಲೀಸ್‌ಗೆ ಸಜ್ಜಾಗಿದೆ. ಪ್ರೈಂ ವಿಡಿಯೊದಲ್ಲಿ ಪುನೀತ್‌ ಅವರ ಜನ್ಮದಿನದಂದೇ(ಮಾರ್ಚ್ 17)ಈ ಡಾಕ್ಯೂಫಿಲಂ ಸ್ಟ್ರೀಮ್‌ ಆಗಲಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಈ ಡಾಕ್ಯೂಫಿಲಂ ನಿರ್ಮಾಣ ಮಾಡಿದ್ದು, ಮಡ್‌ಸ್ಕಿಪ್ಪರ್‌ ಸಹಭಾಗಿತ್ವ ಇದಕ್ಕಿದೆ. ಬಿ. ಅಜನೀಶ್ ಲೋಕನಾಥ್‌ ಸಂಗೀತ ಈ ಸಿನಿಮಾಗಿದೆ. ಕಳೆದ ಅಕ್ಟೋಬರ್‌ 28ರಂದು ರಾಜ್ಯದಾದ್ಯಂತ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ‘ಗಂಧದಗುಡಿ’ ಪುನೀತ್‌ ಅವರ ನಿಸರ್ಗ ಪ್ರೀತಿಯನ್ನು ವೀಕ್ಷಕರ ಎದುರಿಗೆ ಇಟ್ಟಿತ್ತು. ಸಾವಿರಾರು ವಿದ್ಯಾರ್ಥಿಗಳೂ ಚಿತ್ರಮಂದಿರಗಳಲ್ಲಿ ಪುನೀತ್‌ ಅವರನ್ನು ನೋಡಿ ಸಂಭ್ರಮಿಸಿದ್ದರು. ಪುನೀತ್‌ ಅವರು ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡ ಕೊನೆಯ ಚಿತ್ರ ಇದಾಗಿದ್ದ ಕಾರಣ, ಡಾಕ್ಯೂಫಿಲಂ ಬಿಡುಗಡೆಯನ್ನು ಅಭಿಮಾನಿಗಳೂ ಹಬ್ಬದಂತೆಯೇ ಆಚರಿಸಿದ್ದರು.

‘ಈ ಸಿನಿಮಾ ಅಪ್ಪು ಕನಸಿನ ಯೋಜನೆಯಾಗಿತ್ತು. ಪರಿಸರ ಸಂರಕ್ಷಣೆಯ ಬಗ್ಗೆ ಏನಾದರೂ ಮಾಡಬೇಕು ಎಂಬ ಆಸೆ ಅವರಲ್ಲಿತ್ತು. ಅಪ್ಪು ಅಭಿಮಾನಿಗಳು ಮತ್ತು ಕರ್ನಾಟಕದ ಪ್ರೇಕ್ಷಕರು ಈ ಸಿನಿಮಾವನ್ನು ತುಂಬಾ ಮೆಚ್ಚಿದ್ದಾರೆ. ಈ ಸುಂದರ ಪಯಣವನ್ನು ಇಡೀ ವಿಶ್ವವೇ ನೋಡಬೇಕು ಎಂದು ನಾವು ಬಯಸುವುದು ಸಹಜವೂ ಹೌದು’ ಎಂದಿದ್ದಾರೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್.

ADVERTISEMENT

ಪುನೀತ್‌ ತಾವು ‘ಪವರ್‌ಸ್ಟಾರ್‌’ ಎಂಬ ಪಟ್ಟವನ್ನು ಬದಿಗಿಟ್ಟು, ಕಾಡು, ನದಿ, ಬೆಟ್ಟಗುಡ್ಡಗಳು, ಸಮುದ್ರದಾಳ ಹೀಗೆ ಎಲ್ಲೆಡೆ ಹೆಜ್ಜೆ ಹಾಕುವ ಮುಗ್ಧ ಮಗುವಿನಂತೆ ಡಾಕ್ಯೂಫಿಲಂನಲ್ಲಿ ಕಾಣಸಿಗುತ್ತಾರೆ. ಈ ಪ್ರಕೃತಿಯ ಪಯಣದುದ್ದಕ್ಕೂ ಅವರಿಗೆ ಸಾಥ್‌ ನೀಡಿದವರು ಅಮೋಘವರ್ಷ. ಪಯಣದಲ್ಲೇ ಆಪ್ತ ಸಂಗತಿಗಳನ್ನು ಹಂಚಿಕೊಳ್ಳುತ್ತಾ, ಪ್ರಕೃತಿಯಲ್ಲಿ ನಡೆಯುವ ಡ್ರಾಮಾಗಳನ್ನು ವೀಕ್ಷಿಸುತ್ತಾ ಇಬ್ಬರೂ ಸಾಗುತ್ತಾರೆ. ರಾಜ್‌ಕುಮಾರ್‌ ಇಷ್ಟಪಡುತ್ತಿದ್ದ ಗಾಜನೂರಿನ ದೊಡ್ಡ ಆಲದಮರ, ನೇತ್ರಾಣಿ ದ್ವೀಪ, ರಾಜ್ಯದ ಶ್ರೀಮಂತ ವನ್ಯ ಸಂಪತ್ತು, ಸುಂದರ ತಾಣಗಳು, ಜಲಪಾತಗಳು ಮತ್ತು ದಂತಕಥೆಗಳನ್ನು ಇಬ್ಬರೂ ಜೊತೆಗೂಡಿ ವೀಕ್ಷಕರೆದುರು ಇಲ್ಲಿ ಅನಾವರಣಗೊಳಿಸಿದ್ದಾರೆ. ಪ್ರತೀಕ್ ಶೆಟ್ಟಿ ಸಿನಿಮಾಟೊಗ್ರಫಿ ಕರ್ನಾಟಕದ ಹಲವು ಅದ್ಭುತಗಳನ್ನು ಕಟ್ಟಿಕೊಟ್ಟಿದೆ.

Testing

QA Testing

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.