ADVERTISEMENT

ದಿನದ ಸೂಕ್ತಿ: ಹಂಚಿ ತಿನ್ನಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 17 ಅಕ್ಟೋಬರ್ 2021, 5:01 IST
Last Updated 17 ಅಕ್ಟೋಬರ್ 2021, 5:01 IST
ಅನ್ನ
ಅನ್ನ   

ಕಾಕ ಆಹ್ವಯತೇ ಕಾಕಾನ್‌ ಯಾಚಕೋ ನ ತು ಯಾಚಕಾನ್‌ ।

ಕಾಕಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಾಗೆ ಕಾಗೆಗಳನ್ನು ಕರೆಯುತ್ತದೆ. ಆದರೆ ಭಿಕ್ಷುಕನು ಇತರ ಭಿಕ್ಷುಕರನ್ನು ಸೇರಿಸುವುದಿಲ್ಲ. ಕಾಗೆ ಮತ್ತು ಭಿಕ್ಷುಕರಲ್ಲಿ ಕಾಗೆಯೇ ಉತ್ತಮ, ಭಿಕ್ಷುಕನಲ್ಲ.’

ಹಂಚಿಕೊಂಡು ತಿನ್ನುವುದರಲ್ಲಿಯೇ ನಮ್ಮ ದಿಟವಾದ ಸುಖ ಇರುವುದು. ಇದನ್ನು ಕುರಿತು ಸುಭಾಷಿತ ಹೇಳುತ್ತಿದೆ.

ನಾವು ನಿತ್ಯವೂ ನೋಡುವ ಒಂದು ವಿದ್ಯಮಾನ. ಒಂದು ನಾಲ್ಕು ಅಗಳು ಅನ್ನವನ್ನು ಹೊರಗೆ ಹಾಕುತ್ತೇವೆ. ಕಾಗೆಯೊಂದು ಅಲ್ಲಿಗೆ ಬರುತ್ತದೆ. ಆದರೆ ಅದೊಂದೇ ಕಾಗೆ ಆ ಅನ್ನವನ್ನು ತಿನ್ನುವುದಿಲ್ಲ; ಅದು ತನ್ನ ಬಳಗವನ್ನು ಕರೆಯುತ್ತದೆ. ನಾಲ್ಕಾರು ಕಾಗೆಗಳು ಸೇರುವ ತನಕ ಅದು ‘ಕಾ ಕಾ‘ ಎಂದು ಅರಚುತ್ತಲೇ ಇರುತ್ತದೆ. ತನಗೆ ಸಿಕ್ಕಿದ ಅನ್ನವನ್ನು ಅದೊಂದೇ ಕಾಗೆ ತಿನ್ನುವುದಿಲ್ಲ; ನಾಲ್ಕು ಕಾಗೆಗಳೊಂದಿಗೆ ಹಂಚಿಕೊಂಡು ತಿನ್ನುತ್ತದೆ.

ಆದರೆ ಭಿಕ್ಷುಕನೊಬ್ಬ ಹೀಗೆ ನಡೆದುಕೊಳ್ಳುವುದಿಲ್ಲ. ಅವನು ಭಿಕ್ಷೆಗೆಂದು ಯಾವ ರಸ್ತೆಗೆ ಹೋಗುತ್ತಾನೋ, ಯಾವ ಮನೆಗೆ ಹೋಗುತ್ತಾನೋ, ಯಾವ ದೇವಸ್ಥಾನಕ್ಕೆ ಹೋಗುತ್ತಾನೋ, ಅಲ್ಲಿಗೆ ಇನ್ನೊಬ್ಬ ಭಿಕ್ಷುಕ ಬರದಂತೆಯೇ ಅವನು ನೋಡಿಕೊಳ್ಳುತ್ತಾನೆ. ಕಾಗೆಗಳಿಗೂ ಭಿಕ್ಷುಕರಿಗೂ ಇರುವ ವ್ಯತ್ಯಾಸ ಇದೇ. ಪ್ರಾಣಿಗಳಿಗೂ ಮನುಷ್ಯರಿಗೂ ಇರುವ ಅಂತರ ಇದೇ.

ಹೀಗಾಗಿಯೇ ಸುಭಾಷಿತ ಹೇಳುತ್ತಿದೆ, ಭಿಕ್ಷುಕರಿಗಿಂತಲೂ ಕಾಗೆಯೇ ಶ್ರೇಷ್ಠ. ಅನ್ನವನ್ನು ಹಂಚಿ ತಿನ್ನುವುದರಲ್ಲಿಯೇ ಸುಖ ಇರುವುದು.

ಸಾರಾಂಶ

ಹಂಚಿಕೊಂದು ತಿನ್ನುವುದರಲ್ಲಿಯೇ ನಮ್ಮ ದಿಟವಾದ ಸುಖ ಇರುವುದು. ಇದನ್ನು ಕುರಿತು ಸುಭಾಷಿತ ಹೇಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.