ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಬದಲಾಗುವ ಗುಣವೇ ಸೃಷ್ಟಿನಿಯಮ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 17 ಜನವರಿ 2022, 15:00 IST
Last Updated 17 ಜನವರಿ 2022, 15:00 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಬ್ರಹ್ಮದೇವ ಷಟ್ಕುಲೀನಮುನಿಗಳಿಗೆ ಸೃಷ್ಟಿರಹಸ್ಯ ಹೇಳುವಾಗ, ಪ್ರತಿಯೊಂದು ವಸ್ತುವಿನಲ್ಲೂ ಸತ್ವ-ರಜಸ್-ತಮ ಎಂಬ ಮೂರು ಗುಣಗಳು ಇದ್ದೇ ಇರುತ್ತವೆ. ಕೆಲವು ವಸ್ತುವಿನಲ್ಲಿ ಸತ್ವಗುಣವು ಹೆಚ್ಚಾಗಿ, ಕೆಲವು ವಸ್ತುವಿನಲ್ಲಿ ರಜೋಗುಣವೂ, ಮತ್ತೆ ಕೆಲವು ವಸ್ತುವಿನಲ್ಲಿ ತಮೋಗುಣವು ಹೆಚ್ಚಾಗಿರುತ್ತೆ. ಒಂದು ಗುಣವು ಹೆಚ್ಚಾಗಿದ್ದರೆ ಅದಕ್ಕನುಸಾರವಾಗಿ ಮತ್ತೊಂದು ಗುಣವು ಕಡಿಮೆಯಾಗುವುದು. ಆದುದರಿಂದ ಪ್ರಪಂಚದಲ್ಲಿರುವ ಸಮಸ್ತ ಪ್ರಾಣಿಗಳು ಮತ್ತು ವಸ್ತುಗಳು ಈ ಮೂರು ಗುಣಗಳಲ್ಲಿ ಒಂದನ್ನು ಅಥವಾ ಎರಡನ್ನು ಹೆಚ್ಚಾಗಿಯೂ, ಉಳಿದದ್ದನ್ನು ಕಡಿಮೆಯಾಗಿಯೂ ಹೊಂದಿರುವುವು ಅನ್ನುತ್ತಾನೆ.

ಬರೀ ಸತ್ವಗುಣವನ್ನಾಗಲಿ ಅಥವಾ ರಜೋಗುಣವನ್ನಾಗಲಿ ಅಥವಾ ತಮೋಗುಣವನ್ನಾಗಲಿ ಹೊಂದಿರುವ ವಸ್ತುವು ಜಗತ್ತಿನಲ್ಲಿ ಇಲ್ಲ; ಇರಲು ಸಾಧ್ಯವೂ ಇಲ್ಲ. ಪ್ರತಿಯೊಂದು ವಸ್ತುವಿನಲ್ಲಿಯೂ ಮೂರು ಗುಣಗಳು ಹೆಚ್ಚು ಕಡಿಮೆಯಾಗಿ ಇರಲೇಬೇಕು. ಈ ರೀತಿ ಇರುವ ವಸ್ತುಗಳೆಲ್ಲವೂ ಭಗವಂತನ ಚರಾಚರಾತ್ಮಕವಾದ ದೃಶ್ಯಪ್ರಪಂಚವಾಗಿರುತ್ತದೆ. ಸತ್ವ-ರಜಸ್-ತಮಗಳಿಂದ ಕೂಡಿರುವ ವಸ್ತುಗಳಲ್ಲಿ ಸದಾ ಬದಲಾವಣೆಯಾಗುತ್ತಲೇ ಇರುತ್ತದೆ. ಈ ಬದಲಾವಣೆ ನಿಲ್ಲಬೇಕಾದರೆ, ಈ ಗುಣಗಳು ಹೆಚ್ಚು ಕಡಿಮೆಯಿಲ್ಲದೆ ಸಮಾವಸ್ಥೆಗೆ ಬರಬೇಕು. ಸಮಸ್ಥಿತಿ ಬಂದರೆ ಪ್ರಳಯ ಸ್ಥಿತಿಯಾಗುತ್ತದೆ. ಅಂದರೆ ಕ್ಷಣಕ್ಷಣಕ್ಕೂ ಬದಲಾಗುವ ಚಲನಶೀಲತೆಯೇ ಸೃಷ್ಟಿಯ ಚೈತನ್ಯ. ಆ ಬದಲಾವಣೆ ಗುಣ ಕಳೆದುಕೊಂಡಾಗ ಸೃಷ್ಟಿ ನಿಸ್ತೇಜವಾಗುತ್ತೆ. ಆದ್ದರಿಂದಲೇ ಸದಾ ಬದಲಾಗುವ ಗುಣವೇ ಸೃಷ್ಟಿನಿಯಮ.

ಸಮಸ್ಥಿತಿಯಲ್ಲಿರುವ ವಸ್ತುವಿಗೆ ನಾಮರೂಪಭೇದಗಳೂ ದೇಶಕಾಲಾದಿ ಪರಿಮಿತಿಯೂ ಇರುವುದಿಲ್ಲ. ಅಂತಹ ಸ್ಥಿತಿಯಲ್ಲಿರುವ ವಸ್ತುವೇ ನಿತ್ಯಮಯವಾದ ನಿರ್ಗುಣಬ್ರಹ್ಮ. ಇದು ಕೇವಲ ಸಚ್ಚಿದಾನಂದ ರೂಪಾತ್ಮಕವಾಗಿರುತ್ತದೆ. ಇದಕ್ಕೆ ಸದೃಶವಾದ ವಸ್ತುವು ಮತ್ತೊಂದು ಇರುವುದಿಲ್ಲ. ಸತ್ವ-ರಜಸ್-ತಮೋಗುಣಗಳು ಪರಬ್ರಹ್ಮದಲ್ಲಿರುವಾಗ ಸಮವಾಗಿರುತ್ತವೆ. ಇವು ಸೃಷ್ಟಿಕಾಲದಲ್ಲಿ ಹೆಚ್ಚುಕಡಿಮೆಯಾಗಿ ಬದಲಾವಣೆಯ ರೂಪ ತಾಳಿ, ಪ್ರಪಂಚ ಸೃಷ್ಟಿಯಾಗುತ್ತೆ. ಈ ರೀತಿ ಪ್ರಪಂಚಸೃಷ್ಟಿಗೆ ಕಾರಣವಾದ ಪರಬ್ರಹ್ಮವಸ್ತುವೇ ಪರಮೇಶ್ವರನೆಂದೂ, ಈತನೇ ಎಲ್ಲರಿಗಿಂತಲೂ ಶ್ರೇಷ್ಠ, ಜಗತ್ತಿಗೆಲ್ಲ ಒಡೆಯನೆಂದು ಶ್ರುತಿಯಲ್ಲಿಯೂ ಉಪನಿಷತ್ತುಗಳಲ್ಲಿಯೂ ಹೇಳಲ್ಪಟ್ಟಿದೆ. ಪರಬ್ರಹ್ಮವಸ್ತುವನ್ನು ಮಾತುಗಳಿಂದ ತಿಳಿಸಲು ಅಸಾಧ್ಯ. ಕಣ್ಣಿನಿಂದ ನೋಡುವುದಕ್ಕೆ ಆಗದ ಮತ್ತು ಮನಸ್ಸಿನಿಂದ ಯೋಚಿಸುವುದಕ್ಕಾಗದ ವಸ್ತುವನ್ನು ಶಬ್ದಗಳಿಂದ ವರ್ಣಿಸುವುದು ಸಾಧ್ಯವಿಲ್ಲ. ಆದುದರಿಂದ ಶ್ರುತಿಸ್ಮೃತಿ ವೇದಾಂತಗಳೇ ಇದನ್ನು ಸಂಪೂರ್ಣವಾಗಿ ವರ್ಣಿಸಲು ಆಗದೆಂದು ಹೇಳಿರುವಾಗ, ಇಲ್ಲಿ ಅದನ್ನು ವಿವರಿಸುತ್ತೇನೆಂದು ಹೇಳುವುದು ಅಸಂಗತವಾಗುತ್ತೆ. ಇಂತಹ ಪರಮೇಶ್ವರನನ್ನು ಅಸಾಧಾರಣವಾದ ಭಕ್ತಿಯಿಂದ ಮಾತ್ರ ನೋಡಬಹುದು ಅನ್ನುತ್ತಾನೆ ಬ್ರಹ್ಮದೇವ.

ADVERTISEMENT

ಮುನಿಗಳು ಮತ್ತೆ ‘ಬ್ರಹ್ಮದೇವನೇ, ವೇದದಲ್ಲಿ ಹೇಳಿರುವ ಶ್ರೇಷ್ಠವಾದ ಸಾಧನೆ ಎಂದರೆ ಯಾವುದು? ಸಾಧಿಸಬೇಕಾದ ಮಾರ್ಗ ಯಾವುದು? ಸಾಧನೆಗೆ ಉತ್ಕೃಷ್ಟಸಾಧನ ಯಾವುದು? ಅದನ್ನು ಸಾಧಿಸುವವನು ಎಂತಹವನು? ಹೇಳು’ ಅಂತ ವಿನಂತಿಸುತ್ತಾರೆ. ಆಗ ಬ್ರಹ್ಮದೇವ ಶಿವಲೀಲವನ್ನು ಪಡೆಯುವುದೇ ಸಾಧನೆ ಅಂತ ಹೇಳುತ್ತಾನೆ. ಈಶ್ವರಪಥದಲ್ಲಿ ನಡೆಯುವುದೇ ಸಾಧನಾಮಾರ್ಗ. ಶಿವನ ಸೇವೆಯೇ ಸಾಧನೆಗಿರುವ ಸಾಧನ. ಶಿವನ ಸೇವೆಯಿಂದ ಸಿಗುವ ಅನುಭೂತಿಯೇ ವೈರಾಗ್ಯ. ಅನಿತ್ಯವಸ್ತುಗಳಲ್ಲಿ ವೈರಾಗ್ಯವುಳ್ಳವನೇ ಸಾಧಕ. ಅಂದರೆ, ಶಿವನ ಪ್ರೀತಿಗೆ ಪಾತ್ರನಾದವನು ಎಂದರ್ಥ. ಕಿವಿಯಿಂದ ಶಿವನ ನಾಮವನ್ನು ಕೇಳುವುದು, ಬಾಯಿಂದ ಶಿವನನ್ನೇ ಸ್ತುತಿಸುವುದು, ಮನಸ್ಸಿನಿಂದ ಆ ಪರಮೇಶ್ವರನನ್ನೇ ಧ್ಯಾನಿಸುವುದು ಶ್ರೇಷ್ಠವಾದ ಸಾಧನಗಳು.

ಪ್ರತ್ಯಕ್ಷವಾದ ಅಂದರೆ, ಕಣ್ಣಿಗೆ ಕಾಣುವ ವಸ್ತುವನ್ನು ಕಣ್ಣಿನಿಂದ ನೋಡಿ ಜನ ತಿಳಿಯುತ್ತಾರೆ. ಆದರೆ ಪ್ರತ್ಯಕ್ಷವಲ್ಲದ ವಸ್ತುವನ್ನು ಕಿವಿಯಿಂದ ಕೇಳಿ ತಿಳಿಯುತ್ತಾರೆ. ಆದಕಾರಣ ವಿವೇಕಿಯು ಮೊದಲು ಗುರುಮುಖದಿಂದ ಈಶ್ವರನ ಸ್ವರೂಪವನ್ನು ಕೇಳಿ, ಬಳಿಕ ಕೀರ್ತನ ಮತ್ತು ಮನನ ಮಾಡಬೇಕು. ಹೀಗೆ ಶಿವಮಾರ್ಗವನ್ನನುಸರಿಸಿ, ಶಿವಭಕ್ತಿ ಸಾಧನಗಳನ್ನು ಪಡೆದರೆ, ಅವರು ಮುಂದೆ ಶಿವಲೋಕ ಸೇರುವರು ಎಂದು ಬ್ರಹ್ಮದೇವ ಮುನಿಗಳಿಗೆ ಹೇಳುವುದರೊಂದಿಗೆ ಶ್ರೀಶಿವಮಹಾಪುರಾಣದ ವಿದ್ಯೇಶ್ವರಸಂಹಿತೆಯ ಮೂರನೆ ಅಧ್ಯಾಯ ಮುಗಿಯುತ್ತದೆ. 

ಸಾರಾಂಶ

ಬ್ರಹ್ಮದೇವ ಷಟ್ಕುಲೀನಮುನಿಗಳಿಗೆ ಸೃಷ್ಟಿರಹಸ್ಯ ಹೇಳುವಾಗ, ಪ್ರತಿಯೊಂದು ವಸ್ತುವಿನಲ್ಲೂ ಸತ್ವ-ರಜಸ್-ತಮ ಎಂಬ ಮೂರು ಗುಣಗಳು ಇದ್ದೇ ಇರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.