ನವರಾತ್ರಿಯನ್ನು ಭಾರತದೆಲ್ಲೆಡೆ ಆಚರಿಸುವುದು ನಿಜವಾದರೂ ಮೈಸೂರಿನಲ್ಲಿನ ವೈಖರಿಯೇ ಬೇರೆ. ಈ ಪರಂಪರೆ ಕರ್ಣಾಟಕ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಜನನವೆತ್ತಿ ಕ್ರಮೇಣ ರಾಜ ಒಡೆಯರ ಆಳ್ವಿಕೆಯಲ್ಲಿ, ಹದಿನೇಳನೆಯ ಶತಮಾನದಿಂದ, ಮೈಸೂರು ರಾಜ್ಯದಲ್ಲಿ ಪ್ರಚಲಿತವಾಯಿತು. ಮೈಸೂರು ರಾಜ್ಯದಲ್ಲಿ ಮೊದಲಬಾರಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವನ್ನು 17-27 ಸೆಪ್ಟೆಂಬರ್, 1610ರಲ್ಲಿ ಆಚರಿಸಲಾಯಿತು. ಹಿಂದೆ ರಾಜಾಳ್ವಿಕೆಯಲ್ಲಿ ಮಹಾರಾಜರು ಹಾಗೂ ಅವರ ಧಾರ್ಮಿಕ ಆಚಾರಗಳು ದಸರಾ ಹಬ್ಬದ ಕೇಂದ್ರಬಿಂದು. ಭಾರತವು ಸ್ವತಂತ್ರವಾದ ಹಲವು ವರ್ಷಗಳ ಬಳಿಕ, ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಹಾಗೂ ಆದಿಶಕ್ತಿ ಸ್ವರೂಪಳಾದ ಶ್ರೀ ಚಾಮುಂಡೇಶ್ವರಿಯನ್ನೇ ಕೇಂದ್ರಬಿಂದುವಾಗಿ ಕರ್ನಾಟಕ ರಾಜ್ಯವು ಅಳವಡಿಸಿಕೊಂಡಿತು.
ಶ್ರೀ ಚಾಮುಂಡೇಶ್ವರಿಯು ಮೈಸೂರಿನ ಅರಸು ಸಂಸ್ಥಾನದ ಅದಿದೇವತೆ. ಬೆಟ್ಟದ ಮೇಲಿನ ಅಮ್ಮನವರ ದೇವಸ್ಥಾನವನ್ನು ವಿಸ್ತರಿಸಿ, ರಾಜಗೋಪುರವನ್ನು ಕಟ್ಟಿಸಿ, ಗೋಪುರ ಪ್ರತಿಷ್ಠೆ, ಸುವರ್ಣಕಲಶ ಪ್ರತಿಷ್ಠೆ ಮಾಡಿಸಿ ಅಂತರಾಳದಲ್ಲಿ, ಲಕ್ಷ್ಮೀವಿಳಾಸದ ಪಟ್ಟ ಮಹಿಷಿ ಕೃಷ್ಣವಿಳಾಸದ ಧರ್ಮಪತ್ನಿ ರಮಾವಿಳಾಸದ ಧರ್ಮಪತ್ನಿ ಸಹಿತವಾದ ತಮ್ಮ ರೂಪು ಶಿಲಾಪ್ರತಿಮೆಗಳನ್ನು 1824ರಲ್ಲಿ ಸ್ಥಾಪಿಸಿ ಜೀರ್ಣೋದ್ಧಾರಕಾರ್ಯವನ್ನು ಮಹರಾಜ ಮುಮ್ಮಡಿ ಕೃಷ್ಣರಾಜ ಒಡೆಯರವರು ಮಾಡಿದ್ದರು. ತರುವಾಯ, ಗೋಪುರಕ್ಕೆ ರಜತ ಮಹಾದ್ವಾರವನ್ನು 1952ರ ಮಾರ್ಚ್ ಆರರಂದು ಮೈಸೂರಿನ ಕೊನೆಯ ಆಳಿದ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರವರು ಸಮರ್ಪಿಸಿದರು.
ಮೈಸೂರಿನ ಜನರು ದಸರೆಯ ಪ್ರಯುಕ್ತ ತಮ್ಮ ಮನೆಗಳಲ್ಲಿ ಕಳಶವಿಟ್ಟು ಪೂಜಿಸಿ, ದೇವರುಗಳ, ರಾಜ-ರಾಣಿ ಮತ್ತಿತರ ಬೊಂಬೆಗಳನ್ನು ಜೋಡಿಸಿ, ಬೊಂಬೆ ತಿಂಡಿಗಳನ್ನು ಸ್ನೇಹಿತರೊಡನೆ ಹಂಚಿಕೊಂಡು ಹರ್ಷಿಸುತ್ತಾರೆ. ಮೊದಲಿಗೆ ಶ್ರೀ ರಾಜರಾಜೇಶ್ವರಿಯನ್ನು ಪೂಜಿಸಿ, ಸಪ್ತಮಿಯಲ್ಲಿ ಶ್ರೀ ಸರಸ್ವತಿಯನ್ನು, ಅಷ್ಟಮಿಯಲ್ಲಿ ಶ್ರೀ ದುರ್ಗೆಯನ್ನು, ನವಮಿಯಲ್ಲಿ ಆಯುಧಗಳನ್ನು ಹಾಗೂ ದಶಮಿಯಲ್ಲಿ ಶ್ರೀ ಚಾಮುಂಡೇಶ್ವರಿ ಹಾಗು ಶ್ರೀ ರಾಮನನ್ನು ಪೂಜಿಸುತ್ತಾರೆ. ಮೈಸೂರಿನ ಅರಮನೆಯಲ್ಲಿ ಸಿಂಹಾಸನವನ್ನು ಜೋಡಿಸುವುದರಿಂದ ಹಿಡಿದು ಸಕಲ ಪೂಜಾ ಕೈಂಕರ್ಯಗಳು, ಮಹಾರಾಜರ ಸಿಂಹಾಸನಾರೋಹಣ ಇತ್ಯಾದಿ ಕಲಾಪಗಳೆಲ್ಲ ಆಯಾ ಲಗ್ನಕ್ಕೆ ಅನುಸಾರವಾಗಿ ನಡೆಯುತ್ತದೆ.
ಅರಮನೆಯಲ್ಲಿ ಮೂಲಾನಕ್ಷತ್ರದ ಮುಹೂರ್ತದಲ್ಲಿ ಶ್ರೀ ಸರಸ್ವತಿಯ ಪೂಜೆ ನಡೆಯುತ್ತದೆ ಮತ್ತು ಸಪ್ತಮಿಯ ರಾತ್ರಿ ದೇವಿಯ ಕರಾಳರೂಪವಾದ ಶ್ರೀ ಕಾಳರಾತ್ರಿಯ ಪೂಜೆ ನಡೆಯುತ್ತದೆ, ಆದರೆ ಇಲ್ಲಿ ಬಲಿಯ ಪದ್ಧತಿಯಿಲ್ಲ. ಇದನ್ನು ಆಚರಿಸುವ ಪ್ರಯುಕ್ತ ರೋಚಕಗೊಳಿಸುವ ಪುತ್ಥಳಿಯನ್ನು ರಾಜಮನೆತನ ಮಾಡಿಸಿದೆ. ದೇವಿಯ ಮೂರ್ತಿಯಿಂದ ಚಲಾಯಿಸಿದ ಬಾಣ–ಬಿರುಸು ಮಹಿಷಾಸುರನ ಪುತ್ಥಳಿಯನ್ನು ತಾಕಿದಾಗ, ಮಹಿಷನ ರುಂಡವು ಉರುಳಿ, ಅಸುರನು ಹೊರಬರುತ್ತಾನೆ; ಹಾಗೆ ತುಂಬಿಸಿದ ಕುಂಕುಮಸಹಿತ ನೀರು ರಕ್ತದಂತೆ ಸುರಿಯುತ್ತದೆ. ದುರ್ಗಾಷ್ಟಮಿಯಂದು ಚಂಡೀಹೋಮವನ್ನು ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ, ನವಮಿಯ ದಿನದಂದು ಪಟ್ಟದ ಕತ್ತಿಯ ಸಮೇತ ಆಯುಧಗಳನೆಲ್ಲ ಜೋಡಿಸಿ ಮಹಾರಾಜರು ಪೂಜೆ ಸಲ್ಲಿಸುತ್ತಾರೆ. ಪಟ್ಟದ ಆನೆ, ಕುದುರೆ, ವಾಹನಗಳಿಗೆಲ್ಲ ಅಂದು ಪೂಜೆ ನಡೆಯುತ್ತದೆ. ವಿಜಯದಶಮಿಯ ದಿನ ಶ್ರೀ ಚಾಮುಂಡೇಶ್ವರಿ ಮಹಿಷಾಸುರನ ಮೇಲೆ ವಿಜಯಸಾಧಿಸಿದ್ದು ಎಂದು ಪ್ರತೀತಿ, ಇದೆ ದಿನ ಶ್ರೀ ರಾಮನು ರಾವಣನ ಮೇಲೆ ವಿಜಯಸಾಧಿಸಿದ್ದು ಎಂದು ಇನ್ನೊಂದು ಪ್ರತೀತಿ. ಮೈಸೂರಿನಲ್ಲಿ ಆ ದಿನ ಮಹಾರಾಜರ ವಿಜಯ ಯಾತ್ರೆ. ಹಿಂದೆ ಆನೆಯ ಮೇಲೆ ಅಂಬಾರಿಯಲ್ಲಿ ಮಹಾರಾಜರು ಕುಳಿತು, ಸೈನ್ಯಪಡೆಗಳು, ಆನೆ ಗಾಡಿ, ವಾದ್ಯಗಳೊಂದಿಗೆ ಮೆರೆವಣಿಗೆಯಲ್ಲಿ ಬನ್ನಿಮಂಟಪಕ್ಕೆ ತೆರಳಿ, ಅಲ್ಲಿ ಶಮಿ ಪೂಜೆಯನ್ನು ನಡೆಸಿ, ಪಂಜಿನ ಪ್ರದರ್ಶನವನ್ನು ವೀಕ್ಷಿಸಿ ತದನಂತರ ಅರಮನೆಗೆ ತೆರಳುತ್ತಿದ್ದರು. ಅದೇ ಮರೆವಣಿಗೆ ನಾಡಹಬ್ಬವಾಗಿ ಮಾರ್ಪಾಟಾದ ಬಳಿಕ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆಯನ್ನು ರಾಜ್ಯ ಸರ್ಕಾರ ನೆರವೇರಿಸುತ್ತದೆ.
ಆದಿಶಕ್ತಿಯನ್ನು ನದಿ, ಬೆಟ್ಟ, ಅರಣ್ಯ, ವೃಕ್ಷ, ಆಕಾರವಿಲ್ಲದ ಶಿಲೆ ಇತ್ಯಾದಿ ರೂಪಗಳಲ್ಲಿಯೂ ಸಹ ಜನರು ಪೂಜಿಸುತ್ತಾರೆ. ಅವಳು ಕೆರೆಗಳನ್ನು ಕಾಯುವ ಕೆರೆಯಮ್ಮನೂ ಆಗಿರಬಹುದು, ಇಲ್ಲವೇ ಹಳ್ಳಿಯ ಮಾರಮ್ಮನಾಗಿರಬಹುದು. ಮಾರ್ಕಂಡೇಯ ಪುರಾಣದ ದೇವಿಮಹಾತ್ಮೆಯ ಪ್ರಕಾರ, ನವರಾತ್ರಿಯಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಎಂಬ ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ.
ನವರಾತ್ರಿಯನ್ನು ಭಾರತದೆಲ್ಲೆಡೆ ಆಚರಿಸುವುದು ನಿಜವಾದರೂ ಮೈಸೂರಿನಲ್ಲಿನ ವೈಖರಿಯೇ ಬೇರೆ. ಈ ಪರಂಪರೆ ಕರ್ಣಾಟಕ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಜನನವೆತ್ತಿ ಕ್ರಮೇಣ ರಾಜ ಒಡೆಯರ ಆಳ್ವಿಕೆಯಲ್ಲಿ, ಹದಿನೇಳನೆಯ ಶತಮಾನದಿಂದ, ಮೈಸೂರು ರಾಜ್ಯದಲ್ಲಿ ಪ್ರಚಲಿತವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.