ನವದೆಹಲಿ: ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದ ಮಾನಹಾನಿಕರ ಎನ್ನಲಾದ ವಿಡಿಯೊವನ್ನು ಮರುಟ್ವೀಟ್ ಮಾಡಿ ತಪ್ಪೆಸಗಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದರಲ್ಲಿ ತಮಗೆ ನೀಡಲಾಗಿದ್ದ ಸಮನ್ಸ್‌ಅನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರಿದ್ದ ಪೀಠವು ನಡೆಸಿತು.
ಕೇಜ್ರಿವಾಲ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ‘ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸುವಿರಾ’ ಎಂದು ದೂರುದಾರರನ್ನು ಪೀಠವು ಕೇಳಿತು. ಮಾತ್ರವಲ್ಲ, ಕೇಜ್ರಿವಾಲ್ ಅವರ ಪ್ರಕರಣವನ್ನು ಮಾರ್ಚ್ 11ರವರೆಗೆ ಕೈಗೆತ್ತಿಕೊಳ್ಳಬಾರದು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಕೇಜ್ರಿವಾಲ್ ಪರ ಹಾಜರಾದರು.
ಧ್ರುವ್ ರಾಠೀ ಎಂಬವರು ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದಂತೆ ‘ಬಿಜೆಪಿ ಐಟಿ ಸೆಲ್ ಪಾರ್ಟ್–2’ ಎಂಬ ವಿಡಿಯೊವನ್ನು ಯೂ ಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು. ಕೇಜ್ರಿವಾಲ್ ಅದನ್ನು ಮರುಟ್ವೀಟ್ ಮಾಡಿದ್ದರು. ವಿಡಿಯೊದಲ್ಲಿ ಮಾನಹಾನಿಕರ ಅಂಶಗಳು ಇವೆ ಎಂದು ಆರೋಪಿಸಿ ವಿಕಾಸ್ ಸಾಂಕೃತ್ಯಾನನ್ ಎಂಬವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಅವಹೇಳನಕಾರಿ ವಿಷಯಗಳನ್ನು ಮರುಟ್ವೀಟ್ ಮಾಡುವುದು ಕೂಡಾ ಮಾನಹಾನಿ ಕಾನೂನಿನಡಿ ಕ್ರಮಕ್ಕೆ ಅರ್ಹವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಫೆಬ್ರುವರಿ 5ರ ತನ್ನ ತೀರ್ಪಿನಲ್ಲಿ ಹೇಳಿತ್ತು. ದೆಹಲಿ ಸಿ.ಎಂ ಈ ತೀರ್ಪನ್ನು ಪ್ರಶ್ನಿಸಿ ‘ಸುಪ್ರೀಂ’ ಮೊರೆಹೋಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.