ADVERTISEMENT

‘ಆಕಾಸಾ ಏರ್’ ವಿಮಾನ ಸೇವೆಗೆ ಹಸಿರು ನಿಶಾನೆ

ನವದೆಹಲಿ (ಪಿಟಿಐ):
Published 11 ಅಕ್ಟೋಬರ್ 2021, 17:07 IST
Last Updated 11 ಅಕ್ಟೋಬರ್ 2021, 17:07 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ರಾಕೇಶ್ ಜುಂಜುನ್‌ವಾಲಾ ಅವರ ಹೊಸ ವಿಮಾನಯಾನ ಸಂಸ್ಥೆ ‘ಆಕಾಸಾ ಏರ್’ನ ಕಾರ್ಯಾಚರಣೆಗಾಗಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡಿದೆ ಎಂದು ಕಂಪನಿಯ ಪ್ರಕಟಣೆ ಸೋಮವಾರ ತಿಳಿಸಿದೆ.

ಹೊಸ ವಿಮಾನಯಾನ ಸಂಸ್ಥೆಯು 2022ರ ಬೇಸಿಗೆಯೊಳಗೆ ಕಾರ್ಯಾಚರಣೆ ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಎಸ್‌ಎನ್‌ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹೇಳಿದೆ.

ಆಕಾಸಾ ಏರ್ ಅನ್ನು ಷೇರು ಪೇಟೆ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಮತ್ತು ಜೆಟ್ ಏರ್ವೇಸ್‌ನ ಮಾಜಿ ಸಿಇಒ ವಿನಯ್ ದುಬೆ ಜಂಟಿಯಾಗಿ ಆರಂಭಿಸಿದ್ದಾರೆ.

ADVERTISEMENT

‘ನಾಗರಿಕ ವಿಮಾನಯಾನ ಸಚಿವಾಲಯದ ಬೆಂಬಲ ಮತ್ತು ಎನ್‌ಓಸಿ ಮಂಜೂರಾತಿಯಿಂದ ನಮಗೆ ಅತ್ಯಂತ ಸಂತೋಷವಾಗಿದೆ. ಅವರಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ’ಎಂದು ಆಕಾಸಾ ಏರ್ ಸಿಇಒ ದುಬೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

‘ನಾವು ಆಕಾಸಾ ಏರ್ ಅನ್ನು ಯಶಸ್ವಿಯಾಗಿ ಆರಂಭಿಸಲು ಅಗತ್ಯವಿರುವ ಎಲ್ಲಾ ಹೆಚ್ಚುವರಿ ಅನುಸರಣೆಗಳ ಮೇಲೆ ನಿಯಂತ್ರಕ ಅಧಿಕಾರಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

ಅಕಾಸಾ ಏರ್ ಮಂಡಳಿಯಲ್ಲಿ ಇಂಡಿಗೋ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಕೂಡ ಇದ್ದಾರೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 70 ವಿಮಾನಗಳನ್ನು ನಿರ್ವಹಿಸಲು ಏರ್‌ಲೈನ್ ಯೋಜಿಸಿದೆ.

ಏರ್ ಬಸ್ ವಿಮಾನ ಖರೀದಿ ಒಪ್ಪಂದಕ್ಕಾಗಿ ಅಕಾಸಾ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಏರ್ ಬಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಶೆರೆರ್ ಕಳೆದ ವಾರ ಪಿಟಿಐಗೆ ತಿಳಿಸಿದರು.

ಆಕಾಸಾ ಬಿ737 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಅಮೆರಿಕದ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಜೊತೆ ಚರ್ಚಿಸುತ್ತಿದೆ ಎಂದು ಬಹು ಮಾಧ್ಯಮ ವರದಿಗಳು ಹೇಳಿದ್ದವು.

ಸಾರಾಂಶ

ಹೊಸ ವಿಮಾನಯಾನ ಸಂಸ್ಥೆಯು 2022ರ ಬೇಸಿಗೆಯೊಳಗೆ ಕಾರ್ಯಾಚರಣೆ ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಎಸ್‌ಎನ್‌ವಿ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.