ADVERTISEMENT

ಬೆಂಗಳೂರಿನಲ್ಲಿ ₹100ರ ಸನಿಹಕ್ಕೆ ಡೀಸೆಲ್‌ ದರ

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್ ದರ 30 ಪೈಸೆ ಹೆಚ್ಚಳ

ನವದೆಹಲಿ (ಪಿಟಿಐ):
Published 16 ಅಕ್ಟೋಬರ್ 2021, 16:27 IST
Last Updated 16 ಅಕ್ಟೋಬರ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಶನಿವಾರ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ. ಇದರಿಂದಾಗಿ ಬೆಂಗಳೂರು, ಗೋವಾದಲ್ಲಿ ಡೀಸೆಲ್‌ ದರವು ಲೀಟರಿಗೆ ₹ 100ರ ಸನಿಹಕ್ಕೆ ಬಂದಿದೆ.

ಸತತ ಮೂರನೇ ಬಾರಿಗೆ ಇಂಧನ ದರ ಹೆಚ್ಚಿಸಲಾಗಿದೆ. ಅಕ್ಟೋಬರ್‌ 12 ಮತ್ತು 13ರಂದು ಬೆಲೆಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಶನಿವಾರದ ದರ ಏರಿಕೆಯಿಂದ ಡೀಸೆಲ್‌ ದರವು ಪ್ರತಿ ಲೀಟರಿಗೆ ₹ 99.97ಕ್ಕೆ ತಲುಪಿದೆ. ಪೆಟ್ರೋಲ್‌ ದರ ಲೀಟರಿಗೆ ₹ 109.12ಕ್ಕೆ ತಲುಪಿದೆ.

ಪಣಜಿಯಲ್ಲಿ ಡೀಸೆಲ್‌ ದರ ₹ 99.56ಕ್ಕೆ ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 105.49 ಮತ್ತು  ಡೀಸೆಲ್‌ ದರ ಲೀಟರಿಗೆ ₹ 94.22ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 111.43 ಮತ್ತು ಡೀಸೆಲ್‌  ದರ ₹ 102.15ಕ್ಕೆ ಏರಿಕೆ ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ಇಂಧನ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ  ಹೆಚ್ಚಿಸಲಾಗಿದೆ. ಸೆಪ್ಟೆಂಬರ್‌ನಿಂದ ಈವರೆಗೆ ಪೆಟ್ರೋಲ್‌ ದರವನ್ನು 15 ಬಾರಿ ಮತ್ತು ಡೀಸೆಲ್‌ ದರವನ್ನು 18 ಬಾರಿ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 4.30 ಮತ್ತು ಡೀಸೆಲ್‌ ದರ ಲೀಟರಿಗೆ
₹ 5.6ರಷ್ಟು ಹೆಚ್ಚಾಗಿದೆ.

ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ಲೀಟರಿಗೆ ₹ 100ನ್ನು ದಾಟಿ ಮಾರಾಟವಾಗುತ್ತಿದೆ. ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಕೇರಳ ಮತ್ತು ಲಡಾಖ್‌ನಲ್ಲಿ ಸಹ ಡೀಸೆಲ್‌ ದರ ಲೀಟರಿಗೆ ₹ 100ರ ಗಡಿ ದಾಟಿದೆ.

ಸಾರಾಂಶ

ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಶನಿವಾರ ಇಂಧನ ದರ ಹೆಚ್ಚಿಸಿವೆ. ಇದರಿಂದಾಗಿ ಬೆಂಗಳೂರಿನಲ್ಲಿಯೂ ಡೀಸೆಲ್‌ ದರವು ಲೀಟರಿಗೆ ₹ 100ರ ಸನಿಹಕ್ಕೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.