ADVERTISEMENT

ತೈಲ ಆಮದು: ತಗ್ಗಿದ ಒಪೆಕ್ ಪಾಲು

ರಾಯಿಟರ್ಸ್
Published 20 ಜನವರಿ 2022, 15:26 IST
Last Updated 20 ಜನವರಿ 2022, 15:26 IST

ನವದೆಹಲಿ: ಭಾರತಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಒಪೆಕ್ ದೇಶಗಳ ಪಾಲು 2021ರಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಒಟ್ಟು ಪ್ರಮಾಣದಲ್ಲಿ ಶೇಕಡ 3.9ರಷ್ಟು ಹೆಚ್ಚಳ ಆಗಿದ್ದರೂ, ಅದರಲ್ಲಿ ಒಪೆಕ್ ದೇಶಗಳ ಪಾಲು ತಗ್ಗಿದೆ ಎಂಬುದನ್ನು ಅಂಕಿ–ಅಂಶಗಳು ತೋರಿಸುತ್ತಿವೆ.

2008ರಲ್ಲಿ ಭಾರತವು ಆಮದು ಮಾಡಿಕೊಂಡ ಒಟ್ಟು ಕಚ್ಚಾ ತೈಲದಲ್ಲಿ, ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟದಿಂದ (ಒಪೆಕ್) ಬಂದ ಪಾಲು ಶೇ 87ರಷ್ಟು ಇತ್ತು. ಇದು 2021ರಲ್ಲಿ ಶೇ 70ಕ್ಕೆ ಇಳಿಕೆಯಾಗಿದೆ. 2021ರಲ್ಲಿ ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣದಲ್ಲಿ ಶೇ 3.9ರಷ್ಟು ಏರಿಕೆ ಕಂಡುಬಂದಿದ್ದು, ಪ್ರತಿದಿನಕ್ಕೆ 42 ಲಕ್ಷ ಬ್ಯಾರೆಲ್‌ಗೆ ತಲುಪಿದೆ.

ಇಂಧನ ಬೇಡಿಕೆಯು ಹೆಚ್ಚುತ್ತಿರುವ ಕಾರಣ, ಆಮದು ಪ್ರಮಾಣವು ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದ ಕಾರಣದಿಂದಾಗಿ, ತೈಲ ಸಂಸ್ಕರಣಾ ಘಟಕಗಳು ತೈಲ ಸಂಸ್ಕರಣೆಯನ್ನು ಕಡಿಮೆ ಮಾಡಿದ್ದವು.

ADVERTISEMENT

ಡಿಸೆಂಬರ್‌ನಲ್ಲಿ ಆಮದು ಪ್ರಮಾಣವು 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. ಪ್ರತಿದಿನ 47 ಲಕ್ಷ ಬ್ಯಾರೆಲ್‌ ಆಮದು ಮಾಡಿಕೊಳ್ಳಲಾಗಿತ್ತು. ಇದು ನವೆಂಬರ್‌ನಲ್ಲಿ ಮಾಡಿಕೊಂಡಿದ್ದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 5ರಷ್ಟು ಜಾಸ್ತಿ. ‘ಓಮೈಕ್ರಾನ್ ಹರಡುವಿಕೆಗೆ ಸಂಬಂಧಿಸಿದ ಭೀತಿ ಕಡಿಮೆ ಆಗುತ್ತಿರುವ ಕಾರಣ, ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುವ ನಿರೀಕ್ಷೆ ಇದೆ. ಇಂಧನ ಬೇಡಿಕೆ ಜಾಸ್ತಿ ಆಗುತ್ತಿದೆ. ದೇಶವು ತೈಲ ಆಮದು ಮಾಡಿಕೊಳ್ಳುವ ಪ್ರಮಾಣವು ಶೇ 5ರಷ್ಟು ಜಾಸ್ತಿ ಆಗಬಹುದು’ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಅಧ್ಯಕ್ಷ ಎಂ.ಕೆ. ಸುರಾನಾ ಹೇಳಿದರು.

ತೈಲ ಸಂಸ್ಕರಣಾ ಘಟಕಗಳು ಅಮೆರಿಕ ಮತ್ತು ಕೆನಡಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಂಡ ಕಾರಣದಿಂದಾಗಿ, ಒಪೆಕ್ ದೇಶಗಳ ಪಾಲು ತಗ್ಗಿತು ಎಂಬುದನ್ನು ಅಂಕಿ–ಅಂಶಗಳು ತೋರಿಸುತ್ತಿವೆ. ವೆನೆಜುವೆಲಾ ಮತ್ತು ಇರಾನ್ ಮೇಲೆ ಅಮೆರಿಕವು ನಿರ್ಬಂಧಗಳನ್ನು ವಿಧಿಸಿರುವ ಕಾರಣ, ಭಾರತದ ಕಂಪನಿಗಳು ಆಮದಿಗೆ ಅಮೆರಿಕ, ಕೆನಡಾ, ಗಯಾನಾ ಮತ್ತು ಆಫ್ರಿಕಾದ ಕೆಲವು ಸಣ್ಣ ದೇಶಗಳ ಕಡೆ ಮುಖ ಮಾಡಿವೆ.

ಸಾರಾಂಶ

ಭಾರತಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಒಪೆಕ್ ದೇಶಗಳ ಪಾಲು 2021ರಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.