ADVERTISEMENT

ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತಾ ಸಾಲ: ಎಸ್‌ಎಂಇವಿ ಒತ್ತಾಯ

ನವದೆಹಲಿ (ಪಿಟಿಐ):
Published 20 ಜನವರಿ 2022, 16:58 IST
Last Updated 20 ಜನವರಿ 2022, 16:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳಿಗೆ (ಇ.ವಿ.) ಆದ್ಯತಾ ವಲಯದ ಅಡಿಯಲ್ಲಿ ಸಾಲ ನೀಡುವುದನ್ನು ಪರಿಗಣಿಸಬೇಕು. ಇದರಿಂದ ಜನರಿಗೆ ಈ ವಾಹನಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘವು (ಎಸ್‌ಎಂಇವಿ) ಸರ್ಕಾರವನ್ನು ಒತ್ತಾಯಿಸಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಸಂಬಂಧಿಸಿದಂತೆ ಸಂಘವು ಕೇಂದ್ರ ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಹಣಕಾಸಿನ ನೆರವು ನೀಡುವಂತೆ ಕೇಳಿದೆ.

ವಾಹನೋದ್ಯಮ ಮತ್ತು ವಾಹನ ಬಿಡಿಭಾಗಗಳಿಗಾಗಿ ಅನುಕೂಲ ಆಗುವಂತೆ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಗೆ (ಪಿಎಲ್‌ಐ) ತಿದ್ದುಪಡಿ ತರುವ ಅಗತ್ಯ ಇದೆ ಅದು ಹೇಳಿದೆ. ಸದ್ಯ ಇರುವ ಯೋಜನೆಯಲ್ಲಿ ದೊಡ್ಡ ಕಂಪನಿಗಳಿಗೆ ಮಾತ್ರವೇ ಪ್ರಯೋಜನ ಸಿಗುತ್ತಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೂ ಯೋಜನೆಯ ಪ್ರಯೋಜನ ಸಿಗುವಂತೆ ಆಗಬೇಕು ಎಂದು ಅದು ಹೇಳಿದೆ.

ADVERTISEMENT

ಕನಿಷ್ಠ ₹ 10 ಸಾವಿರ ಕೋಟಿ ವರಮಾನ ಹೊಂದಿರುವ ವಾಹನ ತಯಾರಿಕಾ ಕಂಪನಿ ಅಥವಾ ಸಮೂಹ ಕಂಪನಿಯು ಸದ್ಯ ಇರುವ ಪಿಎಲ್‌ಐ ಅಡಿ ಬರುತ್ತದೆ. ವಾಹನ ಬಿಡಿಭಾಗಕ್ಕೆ ಸಂಬಂಧಿಸಿದಂತೆ ₹ 500 ಕೋಟಿ ವರಮಾನ ಹೊಂದಿರಬೇಕು. 2021ರ ಮಾರ್ಚ್‌ 31ರ ಅಂತ್ಯಕ್ಕೆ ಲೆಕ್ಕಪರಿಶೋಧಿತ ಹಣಕಾಸು ಮಾಹಿತಿಯ ಪ್ರಕಾರ, ವಾಹನೋದ್ಯಮ ಅಥವಾ ವಾಹನ ಬಿಡಿಭಾಗ ತಯಾರಿಕೆಯಲ್ಲಿ ಇಲ್ಲದೇ ಇರುವ ಕಂಪನಿ ಅಥವಾ ಸಮೂಹ ಕಂಪನಿಯ ಜಾಗತಿಕ ನಿವ್ವಳ ಮೌಲ್ಯವು ₹ 1,000 ಕೋಟಿ ಇದ್ದರೆ ಅಂತಹ ಕಂಪನಿಯು ಯೋಜನೆಯ ಪ್ರಯೋಜನ ಪಡೆಯಬಹುದು.

ಸಾರಾಂಶ

ವಿದ್ಯುತ್‌ ಚಾಲಿತ ವಾಹನಗಳಿಗೆ (ಇ.ವಿ.) ಆದ್ಯತಾ ವಲಯದ ಅಡಿಯಲ್ಲಿ ಸಾಲ ನೀಡುವುದನ್ನು ಪರಿಗಣಿಸುವಂತೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘವು (ಎಸ್‌ಎಂಇವಿ) ಸರ್ಕಾರವನ್ನು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.