ADVERTISEMENT

ಏರ್‌ ಇಂಡಿಯಾ ಮಾರಾಟ: ತುಹಿನ್ ಕಾಂತ್ ಪಾಂಡೆ ಸಮರ್ಥನೆ

ನವದೆಹಲಿ (ಪಿಟಿಐ):
Published 17 ಅಕ್ಟೋಬರ್ 2021, 13:01 IST
Last Updated 17 ಅಕ್ಟೋಬರ್ 2021, 13:01 IST
ಏರ್ ಇಂಡಿಯಾ
ಏರ್ ಇಂಡಿಯಾ   

ನವದೆಹಲಿ: ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ್ದನ್ನು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆಯಾದರೂ, ‘ಟಾಟಾದವರಿಗೆ ಸಿಕ್ಕಿರುವುದು ಲಾಭ ತಂದುಕೊಡುತ್ತಿದ್ದ ಕಂಪನಿಯೇನೂ ಅಲ್ಲ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿರುಗೇಟು ನೀಡಿದ್ದಾರೆ.

ಹಳೆಯ ವಿಮಾನಗಳನ್ನು ಸರಿಪಡಿಸಲು ಹಣ ಖರ್ಚು ಮಾಡಬೇಕು, ಒಂದು ವರ್ಷದವರೆಗೆ ಕಂಪನಿಯ ಯಾವ ನೌಕರನನ್ನೂ ಕೆಲಸದಿಂದ ತೆಗೆಯುವಂತೆ ಇಲ್ಲ, ವಿಆರ್‌ಎಸ್‌ (ಸ್ವಯಂ ನಿವೃತ್ತಿ ಯೋಜನೆ) ಜಾರಿಗೊಳಿಸಿದ ನಂತರವೇ ಸಿಬ್ಬಂದಿ ಸಂಖ್ಯೆಯಲ್ಲಿ ಮರುಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಪಾಂಡೆ ಅವರು ಹೇಳಿದ್ದಾರೆ.

‘ಇವೆಲ್ಲವೂ ಬಹಳ ಸುಲಭವಾಗಿ ಆಗುವ ಕೆಲಸಗಳಲ್ಲ. ಏರ್‌ ಇಂಡಿಯಾ ವರ್ಷಗಳಿಂದ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಮಾಡಿದ ಸಾಲವನ್ನು ಪೂರ್ತಿಯಾಗಿ ವಹಿಸಿಕೊಳ್ಳಬೇಕಿಲ್ಲ ಎಂಬುದೊಂದೇ ಅವರಿಗೆ (ಟಾಟಾ ಸನ್ಸ್) ಅನುಕೂಲಕರ ಅಂಶ. ಏರ್ ಇಂಡಿಯಾ ಮಾರಾಟದಿಂದಾಗಿ ಸಾರ್ವಜನಿಕರ ಹಣ ಉಳಿತಾಯ ಆಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಟಾಟಾ ಸನ್ಸ್‌ಗೆ ಏರ್‌ ಇಂಡಿಯಾ ಕಂಪನಿಯ 141 ವಿಮಾನಗಳು ದೊರೆಯಲಿವೆ. ಈ ಪೈಕಿ 42 ವಿಮಾಗಳು ಲೀಸ್ ಆಧಾರದಲ್ಲಿ ತೆಗೆದುಕೊಂಡವು. ಇನ್ನುಳಿದ 99 ವಿಮಾನಗಳು ಸ್ವಂತದ್ದು. ‘ಏರ್ ಇಂಡಿಯಾ ಕಂಪನಿಯನ್ನು ನಡೆಸುವುದಾಗಿ ನಾವು ಪ್ರತಿದಿನ ₹ 20 ಕೋಟಿ ಖರ್ಚು ಮಾಡುತ್ತಿದ್ದೇವೆ. ಹಾಗಾಗಿ, ಈ ಕಂಪನಿಯ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ. ಏರ್‌ ಇಂಡಿಯಾದ ಹೊಸ ಮಾಲೀಕ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಆಗ ಮಾತ್ರ ಕಂಪನಿಯನ್ನು ಹಳಿಗೆ ತರಲು ಸಾಧ್ಯ’ ಎಂದು ಪಾಂಡೆ ಹೇಳಿದ್ದಾರೆ.

ಸಾರಾಂಶ

ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ್ದನ್ನು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆಯಾದರೂ, ‘ಟಾಟಾದವರಿಗೆ ಸಿಕ್ಕಿರುವುದು ಲಾಭ ತಂದುಕೊಡುತ್ತಿದ್ದ ಕಂಪನಿಯೇನೂ ಅಲ್ಲ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿರುಗೇಟು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.