ಕಳೆದ ಕೆಲ ತಿಂಗಳಿನಿಂದ ಒಂದೇ ಸಮನೆ ಮಳೆ ಸುರಿದು ಈಗಷ್ಟೇ ಬಿಸಿಲು ಬರಲು ಆರಂಭವಾಗಿದೆ. ಬಿಸಿಲು ಆರಂಭವಾದ ಕೂಡಲೇ ಬೇಡವೆಂದರೂ ಚರ್ಮದ ಸಮಸ್ಯೆಗಳು ಒಂದರ ಹಿಂದೆ ಕಾಣಿಸಿಕೊಳ್ಳುತ್ತವೆ. ಇನ್ನು ಬಿಸಿಲಿನೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಚರ್ಮದ ಕುರಿತು ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಬೇಸಿಗೆ ಬಿಸಿಲು ಮಾತ್ರವಲ್ಲ ಚಳಿಗಾಲದ ಬಿಸಿಲಿಗೂ ತ್ವಚೆಯಲ್ಲಿ ಟ್ಯಾನ್ ಆಗುತ್ತದೆ. ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಅಥವಾ ಸೂರ್ಯನ ಬಿಸಿಲಿಗೆ ಮೈಯೊಡ್ಡದೇ ಇದ್ದರೂ ಟ್ಯಾನ್ ಆಗುವುದು ಸಾಮಾನ್ಯ. ಟ್ಯಾನ್ ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಉತ್ಪನ್ನಗಳು ಸಿಗುತ್ತವೆ. ಆದರೆ ಅಡುಗೆಮನೆಯಲ್ಲಿ ಸಿಗುವ ಉತ್ಪನ್ನಗಳಿಂದ ಸುಲಭವಾಗಿ ಟ್ಯಾನ್ ನಿವಾರಣೆ ಮಾಡಬಹುದು. ಅದರಲ್ಲೂ ನಿಂಬೆಹಣ್ಣು ಟ್ಯಾನ್ ನಿವಾರಣೆಗೆ ಉತ್ತಮ ಔಷಧಿ. ಇದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಮಾತ್ರವಲ್ಲದೇ ಟ್ಯಾನ್ ನಿವಾರಿಸಬಹುದು.
ನಿಂಬೆರಸ
ನಿಂಬೆಹಣ್ಣನ್ನು ಕತ್ತರಿಸಿ, ಅರ್ಧ ಹಣ್ಣಿನ ರಸ ತೆಗೆಯಿರಿ. ಅದಕ್ಕೆ ಸಮ ಪ್ರಮಾಣದಲ್ಲಿ ನೀರು ಸೇರಿಸಿ ಕಲೆಸಿ. ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮುಖಕ್ಕೆ ಹಚ್ಚಿಕೊಳ್ಳಿ. ಇಡೀ ಮುಖಕ್ಕೆ ಹಚ್ಚಿಕೊಂಡಾಗ ಕಿರಿಕಿರಿ ಅನ್ನಿಸಿದರೆ ಪಿಗ್ಮಂಟೇಷನ್ ಆಗಿರುವ ಜಾಗಕ್ಕಷ್ಟೇ ಹಚ್ಚಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ದಿನ ಬಿಟ್ಟು ದಿನ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ನಿಂಬೆರಸವನ್ನು ಹಚ್ಚಿಕೊಂಡಾಗ ಬಿಸಿಲಿನಲ್ಲಿ ಓಡಾಡಬೇಡಿ, ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇದೆ.
ನಿಂಬೆಸಿಪ್ಪೆಯ ಸ್ಕ್ರಬ್
ನಿಂಬೆಸಿಪ್ಪೆಯನ್ನು ಸ್ಕ್ರಬ್‌ನಂತೆ ಉಪಯೋಗಿಸುವುದರಿಂದ ಇದು ಒಣ ಹಾಗೂ ಸತ್ತ ಚರ್ಮವನ್ನು ಕಿತ್ತು ಹಾಕುತ್ತದೆ. ನಿಂಬೆಸಿಪ್ಪೆಯನ್ನು ತರಿತರಿಯಾಗಿ ಹೆರೆದುಕೊಳ್ಳಿ. ಅದಕ್ಕೆ ಮೂರ್ನಾಲ್ಕು ಹನಿ ನಿಂಬೆರಸ ಹಾಗೂ ನೀರು ಸೇರಿಸಿ. ಅದನ್ನು ಫೇಶಿಯಲ್ ಸ್ಕ್ರಬ್‌ನಂತೆ ಬಳಸಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಲ್ಲದೇ ಟ್ಯಾನ್ ಕೂಡ ನಿವಾರಣೆಯಾಗುತ್ತದೆ.
ಮೊಸರು, ನಿಂಬೆರಸ ಹಾಗೂ ಅರಿಸಿನದ ಫೇಸ್‌ಮಾಸ್ಕ್
ಮೊಸರು ಮುಖದ ಮೇಲಿನ ಕಪ್ಪುಕಲೆಗಳನ್ನು ನಿವಾರಿಸುತ್ತದೆ. ಅರಿಸಿನವು ಬುಡದಿಂದಲೇ ಕಪ್ಪುಕಲೆಯನ್ನು ನಿವಾರಿಸುತ್ತದೆ. ನಿಂಬೆರಸದಲ್ಲಿ ನೈಸರ್ಗಿಕ ಬ್ಲೀಚಿಂಗ್ ಅಂಶವಿದೆ. ಈ ಮೂರರ ಮಿಶ್ರಣ ತ್ವಚೆಯ ಹೊಳಪು ಹೆಚ್ಚುವಂತೆ ಮಾಡುತ್ತವೆ. ಒಂದು ಚಮಚ ಮೊಸರಿಗೆ ಅರ್ಧ ನಿಂಬೆರಸ ಹಾಗೂ ಚಿಟಿಕೆ ಅರಿಸಿನ ಸೇರಿಸಿ. ಮುಖವನ್ನು ಚೆನ್ನಾಗಿ ತೊಳೆದು ಈ ಫೇಸ್‌ಮಾಸ್ಕ್ ಹಚ್ಚಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬಿಸಿನೀರಿನಲ್ಲಿ ಬಟ್ಟೆಯನ್ನು ಅದ್ದಿ ಚೆನ್ನಾಗಿ ಒರೆಸಿ. ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.
ಸಕ್ಕರೆ, ಜೇನುತುಪ್ಪ ಹಾಗೂ ನಿಂಬೆರಸ
ಈ ಮೇಲಿನ ಮಿಶ್ರಣವು ತ್ವಚೆಯ ಕಾಂತಿ ಹೆಚ್ಚಲು ಸಹಕಾರಿ. ಸಕ್ಕರೆ ಸತ್ತ ಚರ್ಮದ ತೆಗೆದು ಹಾಕಲು ಸಹಾಯ ಮಾಡುತ್ತದೆ. ಬೌಲ್‌ನಲ್ಲಿ ಒಂದು ಚಮಚ ಸಕ್ಕರೆ, ಅರ್ಧ ನಿಂಬೆಹಣ್ಣಿನ ರಸ ಹಾಗೂ ಅರ್ಧ ಚಮಚ ಜೇನುತುಪ್ಪ ಸೇರಿಸಿ. ಚರ್ಮವನ್ನು ತೇವವಾಗಿಸಿಕೊಂಡು ಈ ಪೇಸ್ಟ್‌ನಿಂದ ಮುಖಕ್ಕೆ ಸ್ಕ್ರಬ್ ಮಾಡಿ. ಇದನ್ನು 5 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬಿಸಿನೀರಿನಿಂದ ಮುಖ ತೊಳೆದುಕೊಳ್ಳಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.
ಶ್ರೀಗಂಧ ಹಾಗೂ ನಿಂಬೆರಸ
ಒಂದು ಚಮಚ ಶ್ರೀಗಂಧಕ್ಕೆ ಕೆಲವು ಹನಿ ನಿಂಬೆರಸ ಹಾಗೂ ಸೌತೆಕಾಯಿ ರಸ ಸೇರಿಸಿ. ಮೊದಲು ರಾಸಾಯನಿಕವಲ್ಲದ ಫೇಸ್‌ವಾಷ್‌ನಿಂದ ಮುಖ ತೊಳೆದುಕೊಳ್ಳಿ. ನಂತರ ತಯಾರಿಸಿಕೊಂಡ ಪೇಸ್ಟ್ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಇದನ್ನು ಒಣಗಲು ಬಿಡಿ. ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.
ನಿಂಬೆರಸ ಹಾಗೂ ಗುಲಾಬಿ ಜಲ
5 ಚಮಚ ಗುಲಾಬಿ ಜಲಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಮಲಗುವ ವೇಳೆ ಮುಖಕ್ಕೆ ಹಚ್ಚಿಕೊಂಡು ಮಲಗಿ. ಮರುದಿನ ಬೆಳಿಗ್ಗೆ ಶುದ್ಧನೀರಿನಿಂದ ಮುಖ ತೊಳೆಯಿರಿ. ನಿಂಬೆರಸ ಚರ್ಮದ ಹೊಳಪು ಹೆಚ್ಚಿಸಿದರೆ, ಗುಲಾಬಿ ಜಲ ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ.
ಬೇಸಿಗೆ ಬಿಸಿಲು ಮಾತ್ರವಲ್ಲ ಚಳಿಗಾಲದ ಬಿಸಿಲಿಗೂ ತ್ವಚೆಯಲ್ಲಿ ಟ್ಯಾನ್ ಆಗುತ್ತದೆ. ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಅಥವಾ ಸೂರ್ಯನ ಬಿಸಿಲಿಗೆ ಮೈಯೊಡ್ಡದೇ ಇದ್ದರೂ ಟ್ಯಾನ್ ಆಗುವುದು ಸಾಮಾನ್ಯ. ಟ್ಯಾನ್ ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಉತ್ಪನ್ನಗಳು ಸಿಗುತ್ತವೆ. ಆದರೆ ಅಡುಗೆಮನೆಯಲ್ಲಿ ಸಿಗುವ ಉತ್ಪನ್ನಗಳಿಂದ ಸುಲಭವಾಗಿ ಟ್ಯಾನ್ ನಿವಾರಣೆ ಮಾಡಬಹುದು. ಅದರಲ್ಲೂ ನಿಂಬೆಹಣ್ಣು ಟ್ಯಾನ್ ನಿವಾರಣೆಗೆ ಉತ್ತಮ ಔಷಧಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.