ADVERTISEMENT

test oct ಬೆಂಗಳೂರಲ್ಲಿ ನೋಡಿ ನಿಮ್ಮೂರtab

sub

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 9:09 IST
Last Updated 10 ಅಕ್ಟೋಬರ್ 2024, 9:09 IST
ಹ್ಯಾಂಡಲ್‌ ಇಲ್ಲದ ಬೈಕ್‌ ಓಡಿಸಿದ ಈರಣ್ಣ ಜಿ. ಕುಂದರಗಿಮಠ ಅವರನ್ನು ಬೆಂಗಳೂರಲ್ಲಿ ಸಚಿವ ಶಿವರಾಜ ತಂಗಡಗಿ ಸ್ವಾಗತಿಸಿದರು
ಹ್ಯಾಂಡಲ್‌ ಇಲ್ಲದ ಬೈಕ್‌ ಓಡಿಸಿದ ಈರಣ್ಣ ಜಿ. ಕುಂದರಗಿಮಠ ಅವರನ್ನು ಬೆಂಗಳೂರಲ್ಲಿ ಸಚಿವ ಶಿವರಾಜ ತಂಗಡಗಿ ಸ್ವಾಗತಿಸಿದರು    

ಮಂಜುನಾಥ ಭದ್ರಶೆಟ್ಟಿ

ನಮ್ಮ ನಾಡಿನ ಬಹುತೇಕ ಹಳ್ಳಿಗಳು ಅವು ಎಷ್ಟೇ ಚಿಕ್ಕದಾದರೂ ಬಹುಸಂಸ್ಕೃತಿ, ಬಗೆಬಗೆಯ ಕಸಬು, ವೈವಿಧ್ಯಮಯ ಆಚಾರ–ವಿಚಾರದೊಂದಿಗೆ ಬೆಳೆದು ಸಾಮುದಾಯಿಕ ಜೀವನದ ಚಿತ್ರಣವನ್ನು ತೆರೆದಿಟ್ಟಿದ್ದವು. ಯಾವುದೇ ಹಳ್ಳಿಗೆ ಹೋದರೂ ಆ ಊರಿನ ಸುತ್ತಲೂ ಗಿಡ ಮರ, ಹೂಬಳ್ಳಿಗಳು, ಊರಿನ ಅಗಸಿ ಪ್ರವೇಶಿಸಿದಾಗ ಅಲ್ಲೊಂದು ಅರಳಿಕಟ್ಟೆ ಅಥವಾ ಬೇವಿನಕಟ್ಟೆ, ಅದರಲ್ಲಿನ ಹಕ್ಕಿಗಳ ಚಿಲಿಪಿಲಿ, ಆ ಗಿಡಗಳ ಕೆಳಗೆ ಬಸ್ ನಿಲ್ದಾಣ, ಅಲ್ಲಿಯೇ ನೆರಳಲ್ಲಿ ಕೂತು ಧಣಿವಾರಿಸಿಕೊಳ್ಳುವ ಅಜ್ಜಂದಿರುಹಾಗೆಯೇ ಒಳಹೊಕ್ಕರೆ ಆ ಊರಲ್ಲೊಂದು ಹಿರೀಕರ ಮನೆ, ಜೊತೆಗೆ ರೈತರ ಮನೆಗಳು, ಒಂದೆರಡು ಕಿರಾಣಿ ಅಂಗಡಿ, ವಿವಿಧ ಕಸುಬುಗಳನ್ನು ಮಾಡುವವರ ಮನೆಗಳು, ಒಂಚೂರು ದೂರದಲ್ಲಿ ಶಾಲೆ, ಒಂದೋ ಎರಡೋ ಗುಡಿಗಳು.. ಇನ್ನೂ ಸ್ವಲ್ಪ ಕಣ್ಣರಳಿಸಿದಾಗ ಆಚೆಈಚೆ ಕೆರೆತೊರೆ, ಗ್ರಾಮಕ್ಕೆ ಅಂಟಿಕೊಂಡಿರುವ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಮಣ್ಣಿನ ಮಕ್ಕಳು, ಅಲ್ಲಿಯೇ ಬದುವಿನಲ್ಲಿ ಮೇಯುವ ಹಸುಕರು ಎಮ್ಮೆಗಳು, ಗೋಧೂಳಿಯಲ್ಲಿ ಮನೆಯತ್ತ ಓಡುವ ದನಗಳು, ದಿನವಿಡೀ ದಣಿದು ನೇಸರನೊಂದಿಗೆ ನಿದ್ದೆಗೆ ಜಾರುವ ಜನಗಳು!ಆದರೆ, ಭಾರತದಲ್ಲಿ ಜಾಗತೀಕರಣದಿಂದ ಉಂಟಾದ ನಗರೀಕರಣ, ಆಧುನೀಕರಣ ಈ ಎಲ್ಲ ದೃಶ್ಯಗಳನ್ನು ಅದೃಶ್ಯವಾಗುತ್ತಿವೆ. ‘ಗ್ರಾಮೀಣ ಸಂಸ್ಕೃತಿ ಭಾರತದ ಆತ್ಮ’ ಎಂದು ಗಾಂಧೀಜಿ ಹೇಳುತ್ತಿದ್ದರು. ಆದರೆ, ನಗರದವರು ಅಷ್ಟೇ ಅಲ್ಲ, ಹಳ್ಳಿಗರೂ ಮರೆತು ಹೋಗುತ್ತಿರುವ ಈ ಗ್ರಾಮೀಣ ಬದುಕಿನ ಸೊಗಡನ್ನು ತೋರಿಸುವಲ್ಲಿ ದೇಶದ ಅನೇಕ ನಗರಗಳಲ್ಲಿ ‘ಮಾದರಿ ಕಲಾ ಗ್ರಾಮ’ಗಳು ತಲೆ ಎತ್ತುತ್ತಿವೆ. ಹೀಗೆ ನಿರ್ಮಾಣವಾಗುವ ಗ್ರಾಮಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.ನಮ್ಮ ಗ್ರಾಮಗಳು ಹೇಗಿರುತ್ತಿದ್ದವು? ಎಂಬುದನ್ನು ಇಂದಿನ ತಲೆಮಾರಿನವರಿಗೆ ತೋರಿಸುವುದಕ್ಕೆ, ಮರೆತಿರುವವರಿಗೆ ಮತ್ತೆ ನೆನಪಿಸುವುದಕ್ಕೆ ಬೆಂಗಳೂರಿನ ಜಕ್ಕೂರು ಬಳಿ ಇರುವ ರಾಚೇನಹಳ್ಳಿ ಕೆರೆಗೆ ಹೊಂದಿಕೊಂಡಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿನ ಮೂರು ಎಕರೆಯಲ್ಲಿ ‘ಮಾದರಿ ಪಾರಂಪರಿಕ ಕಲಾ ಗ್ರಾಮ’ ರೂಪುಗೊಂಡಿದೆ.

App DownloadDownload Now
Sign Up BonusUpto Rs.1000
Per ReferUpto Rs.1000
App DownloadDownload Now

ಈ ಕಲಾ ಗ್ರಾಮದೊಳಗೆ ಕಾಲಿಟ್ಟರೆ ಸಾಕು, ಒಂದೊಂದು ಪ್ರಾತ್ಯಕ್ಷಿಕೆಯೂ ಒಂದೊಂದರ ಹಿನ್ನೆಲೆಯನ್ನು ತೆರೆದಿಡುತ್ತದೆ. ಉತ್ತರ ಕರ್ನಾಟಕದ ಪಾಟೀಲ, ಶೆಟ್ಟರ, ಕುಲಕರ್ಣಿಯರ ಸಾಂಪ್ರಾದಾಯಿಕ ಮನೆಗಳು, ಮಂಡ್ಯ–ಮೈಸೂರು ಭಾಗದ ತೊಟ್ಟಿ ಮನೆಗಳು, ಮಲೆನಾಡಿನ ಪಾರಪಂಪರಿಕ ಚೌಕಿ ಮನೆ, ಕಂಬಾರ, ಕುಂಬಾರರ, ಚಮ್ಮಾರರ, ಬಡಿಗೇರ, ಅಂಬಿಗರ, ಸಿಂಪಿಗರ, ಬಳೆಗಾರರ, ಹೂಗಾರ, ಪೂಜಾರಿ, ನೇಕಾರ, ಗಾಣಿಗ, ಕುರುಬ, ಅಕ್ಕಸಾಲಿಗ, ಮೀನುಗಾರ–ಹೀಗೆ ಹತ್ತಾರು ಕಸುಬು ಮಾಡುವವರ ಮನೆಯ ಮಾದರಿಗಳನ್ನು ನಿರ್ಮಿಸಲಾಗಿದೆ. ‘ನಾನು ನಗರದಲ್ಲಿ ಹುಟ್ಟಿ ಬೆಳೆದವಳು. ನಮ್ಮ ಅಜ್ಜ ಅಜ್ಜಿ ಹಳ್ಳಿಯಲ್ಲಿದ್ದರು. ಅವರು ವಾಸಿಸುತ್ತಿದ್ದ ಮನೆ, ಪರಿಸರ ಹೇಗಿತ್ತು ಎಂಬುದಮ್ಮಿ ಇಲ್ಲಿಯ ಕಲಾಕೃತಿಗಳು ನೆನಪಿಸುತ್ತಿವೆ. ಇಲ್ಲಿ ಹಳೆಯ ಹೆಂಚಿನಮನೆ ನೋಡಿ, ನಮ್ಮ ಮನೆ ನೆನಪಿಗೆ ಬಂತು’ ಎಂದು ಬೆಂಗಳೂರಿನ ಜಯಶ್ರೀ ಕೆ. ಹೇಳಿದರು.

ADVERTISEMENT

ಕೇವಲ ಮನೆಯಷ್ಟೇ ನಿರ್ಮಿಸಿಲ್ಲ. ಆ ಮನೆಗಳ ಮುಂದೆ ಸಾಮಾಜಿಕ ವಾತಾವರಣ ಹೇಗಿರುತ್ತಿತ್ತು ಎಂಬುದನ್ನು ತೋರಿಸಲು ಆಯಾ ಕಸುಬುಗಳನ್ನು ಮಾಡುವ ಯಜಮಾನ, ಮನೆಯಲ್ಲಿನ ಹೆಣ್ಣುಮಕ್ಕಳು, ಮಕ್ಕಳು, ವಯೋವೃದ್ಧರು, ಅವರ ಜೊತೆಯಾಗಿರುತ್ತಿದ್ದ ಪ್ರಾಣಿ, ಪಕ್ಷಿ, ಪರಿಕರಗಳಿಗೆ ಜೀವಂತಿಕೆ ಬಂದಿರುವುದು ನೋಡುಗರಲ್ಲಿ ಬೆರಗು ಮೂಡಿಸುತ್ತದೆ.ನಗರದಲ್ಲಿದ್ದು ತಮ್ಮ ಊರುಕೇರಿ ಮರೆತವರಿಗೆ ಈ ಗ್ರಾಮ ಪ್ರವೇಶಿಸಿದಾಗ ವ್ಹಾ! ಇದು ನಮ್ಮನೆ, ನಮ್ಮೂರು, ನಮ್ಮ ಓಣಿ ಹೀಗಿತ್ತು, ನಮ್ಮ ಕೇರಿ ಹೀಗಿತ್ತು ಎಂದು ಖಂಡಿತವಾಗಿಯೂ ಅನಿಸುತ್ತದೆ.ಹಳ್ಳಿಯಿಂದ ಬಂದು ನಗರದಲ್ಲಿ ನೆಲೆ ನಿಂತಿರುವವರು ತಮ್ಮ ಮಕ್ಕಳಿಗೆ, ನಿಮ್ಮ ತಾತ ಹೀಗೆ ಕುಳಿತುಕೊಳ್ಳುತ್ತಿದ್ದರು, ಅಜ್ಜಿ ಹೀಗೆ ಅಡುಗೆ ಮಾಡುತ್ತಿದ್ದರು. ನಮ್ಮ ಕೊಟ್ಟಿಗೆ, ಎತ್ತು, ಆಕಳು, ಎಮ್ಮೆ ಹೀಗೆ ಇರುತ್ತಿದ್ದವು. ನಾವು ಹೀಗೆ ಆಟ ಆಡುತ್ತಿದ್ದೆವು ಎಂದು ಹೇಳುವಾಗ ತಮ್ಮಲ್ಲೇ ತಾವು ಕಳೆದು ಹೋಗುತ್ತಾರೆ. ‘ಗೂಗಲ್ ನೋಡಿ ಇಲ್ಲಿಗೆ ಭೇಟಿ ಕೊಟ್ಟೆ. ನಮ್ಮ ಹಳ್ಳಿಗಳ ಗತವೈಭವವನ್ನು ಇಲ್ಲಿ ನೆನಪಿಸಲಾಗುತ್ತಿದೆ. ಮನೋರಂಜನೆ ಅಷ್ಟೇ ಅಲ್ಲದೇ ಈಗಿನ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಇದು ಪೂರಕ’ ಎಂದು ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಕಾರ್ತಿಕ್ ಹೇಳಿದರು.ಊರಿನಲ್ಲಿ ನಡೆಯುತ್ತಿದ್ದ ಜಾತ್ರೆ, ಆ ಜಾತ್ರೆಯಲ್ಲಿನ ಕುಸ್ತಿ ಪಂದ್ಯಾವಳಿಗಳು, ಕೆರೆಕಟ್ಟೆ ಬಾವಿಗಳ ಕಡೆಗಿನ ಜೀವಂತಿಕೆ, ಹೊಲದಲ್ಲಿ ಗೇಯುವ ಎತ್ತುಗಳು, ಮೇಯುವ ದನಗಳು, ರೈತರು ಬಗ್ಗಿ ದುಡಿದು ಹಿಗ್ಗಿ ಮಾಡುವ ಸುಗ್ಗಿ ಸಂಭ್ರಮ... ಹೀಗೆ ಪ್ರತಿಯೊಂದು ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಬಯಲಾಟ, ಯಕ್ಷಗಾನ, ಕಂಬಳ, ಶಾಲೆ ಗುಡಿ, ಸಂತೆ, ರಂಗಮಂದಿರದ ಮಾದರಿಗಳ ನೈಜ ಎನ್ನುವಂತಿದ್ದು, ಸೋಜಿಗವನ್ನು ಉಂಟು ಮಾಡುತ್ತವೆ.ಈ ರೀತಿಯ ‘ಮಾದರಿ ಗ್ರಾಮ’ಗಳನ್ನು ನೋಡಿ ಸಂಭ್ರಮಿಸಬೇಕೋ ಅಥವಾ ಆಧುನೀಕರಣದ ತೆಕ್ಕೆಗೆ ಸಿಕ್ಕು ನಾವು ನಮ್ಮದನ್ನು ಕಳೆದುಕೊಳ್ಳುತ್ತಿದ್ದೇವೋ ಎಂಬ ವಿಷಾದ ಭಾವ ಮೂಡುವುದರಲ್ಲಿ ಸಂದೇಹವಿಲ್ಲ. ಆದರೆ, ಬಹಳ ವರ್ಷ ನಗರದಲ್ಲಿಯೇ ನೆಲೆಸಿ ತಮ್ಮ ಹಳ್ಳಿಗಳನ್ನು ಮರೆತಿರುವವರು ಇಮ್ಮೆ ಭೇಟಿ ನೀಡಲೇಬೇಕಾದ ಗ್ರಾಮವಿದು.ಸೊಲಬಕ್ಕನವರ್ ಎಂಬ ರೂವಾರಿಬೆಂಗಳೂರಿನಲ್ಲಿ ‘ಮಾದರಿ ಪಾರಂಪರಿಕ ಕಲಾ ಗ್ರಾಮ’ ನಿರ್ಮಾಣಗೊಳ್ಳುವ ಮುನ್ನ ಶಿಗ್ಗಾವಿ ಬಳಿಯ ಗೋಟಗೋಡಿ ‘ರಾಕ್ ಗಾರ್ಡನ್‌’ನಲ್ಲಿ ಈ ರೀತಿಯ ಯಶಸ್ವಿ ಪ್ರಯತ್ನವನ್ನು ಮಾಡಲಾಗಿದೆ. ಈ ಎಲ್ಲದರ ಹಿಂದಿನ ರೂವಾರಿ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಶಿಗ್ಗಾವಿ ತಾಲ್ಲೂಕಿನ ಹುಲಿಸೋಗಿಯ ದಿವಂಗತ ಟಿ.ಬಿ. ಸೊಲಬಕ್ಕನವರ.ಮರೆತು ಹೋಗುತ್ತಿರುವ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಕಲಾಕೃತಿಗಳ ಮೂಲಕ ಜೀವಂತವಾಗಿಡಬೇಕು ಎಂಬ ಆಶಯ ಮತ್ತು  ಸೊಲಬಕ್ಕನವರ ಒತ್ತಾಸೆಯಿಂದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ಕಲಾ ಗ್ರಾಮ’ವನ್ನು ರೂಪಿಸಲು ಕ್ರಮ ಕೈಗೊಂಡಿತು. ಸೊಲಬಕ್ಕನವರ ಅವರ ಪುತ್ರ ರಾಜಹರ್ಷ ಈ ಪಾರಂಪರಿಕ ಗ್ರಾಮವನ್ನು 2020ರಲ್ಲಿ ರೂಪಿಸಿದರು. ‘ರಂಗೋಲಿ ಗಾರ್ಡನ್’ ಎಂಬ ಸಂಸ್ಥೆ ನಿರ್ವಹಣೆಯ ಹೊಣೆ ಹೊತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.